Advertisement
ಜಿಲ್ಲಾ ಕೇಂದ್ರದಿಂದ ಶಿಡ್ಲಘಟ್ಟ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದು, ಈ ಮಾರ್ಗದಲ್ಲಿಸಂಚರಿಸುವ ದ್ವಿಚಕ್ರ ವಾಹನ ಸವಾರರು ಅಂಗೆ„ಯಲ್ಲಿ ಜೀವವಿಟ್ಟುಕೊಂಡು ಪ್ರತಿನಿತ್ಯ ಹರಸಾಹಸ ಮಾಡುವಂತಾಗಿದೆ.
ಗಣ್ಯರ ಓಡಾಟ: ಜಿಲ್ಲಾ ಕೇಂದ್ರದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 234 ಹದಗೆಟ್ಟಿರುವುದನ್ನು ನೋಡಿದರೆ ಜಿಲ್ಲಾ ಹೆದ್ದಾರಿಗಿಂತಲೂ ಕಡೆಯಾಗಿದೆ ಎಂಬ ಅನುಮಾನ ಮೂಡುವಂತಾಗಿದೆ. ಇದೇ
ಮಾರ್ಗದಲ್ಲಿ ಪ್ರತಿನಿತ್ಯ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಮತ್ತು ಇಲಾಖಾ ಪ್ರಗತಿ ಪರಿಶೀಲನಾ ಸಭೆ ಸಹಿತ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಸಹಿತ ಜಿಲ್ಲೆಗೆ
ಆಗಮಿಸುವ ಗಣ್ಯ ವ್ಯಕ್ತಿಗಳು ಸಂಚರಿಸುತ್ತಾರೆ.
Related Articles
ರಾಷ್ಟ್ರೀಯ ಹೆದ್ದಾರಿ 234 ಮೂಲಕ ಹೆ„ದರಾಬಾದ್, ಗೌರಿಬಿದನೂರು, ಮಧುಗಿರಿ ವಯಾ ಮುಂಬೆ„ ಮತ್ತು ದೆಹಲಿಗೆ ಪ್ರತಿನಿತ್ಯ
ನೂರಾರು ವಾಹನಗಳು ಸಂಚರಿಸುತ್ತಿವೆ. ಈ ಭಾಗದ ರೈತರು ಬೆಳೆದ ತರಕಾರಿಗಳನ್ನು ಸರಕು ಸಾಗಾಣಿಕೆ ವಾಹನಗಳ ಮೂಲಕ ಇದೇ ಮಾರ್ಗದಿಂದ ರಾಜ್ಯದ ನಾನಾ ಭಾಗಗಳಲ್ಲಿ ರಫ್ತು ಮಾಡುತ್ತಾರೆ. ಜೊತೆಗೆ ಚಿಂತಾಮಣಿ ಶಿಡ್ಲಘಟ್ಟ ತಾಲೂಕಿನ ನಾಗರಿಕರು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಬರಲು ಇದೇ ಮಾರ್ಗ ಅವಲಂಬಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಶೋಚನೀಯ ಸ್ಥಿತಿಯನ್ನು ನಿತ್ಯ ದರ್ಶನ ಮಾಡುವ ವಾಹನ ಸವಾರರು, ಜನಪ್ರತಿನಿಧಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಪ ಹಾಕಿ ತೆರಳುತಿದ್ದಾರೆ.
Advertisement
ಕಿತ್ತು ಬಂದಿರುವ ಕಬ್ಬಿಣ: ರಾ.ಹೆ.234 ರಲ್ಲಿ (ಅಣಕನೂರು ಸಮೀಪ) ರಸ್ತೆಗೆ ಹಾಕಿರುವ ಕಬ್ಬಿಣವು ಸಹ ಕಿತ್ತು ಬಂದಿದ್ದು, ದ್ವಿಚಕ್ರ ವಾಹನ ಸವಾರರ ಪಾಲಿಗೆ ಮೃತ್ಯು ಕೂಪವಾಗಿದ್ದು, ಅನಾಹುತ ಸಂಭವಿಸುವ ಆತಂಕ ಮನೆ ಮಾಡಿದೆ. ಯಾವ ರೀತಿ ಹದಗೆಟ್ಟಿದೆ ಎಂದರೆ ಡಾಂಬರು ಕಿತ್ತು ಕಬ್ಬಿಣ ಕಾಣಿಸುತ್ತಿದೆ. ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ಕಬ್ಬಿಣ ತಪ್ಪಿಸುವ ಭರದಲ್ಲಿ ಕೆಳಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಈಗಾಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ 234ನ್ನು ಅಭಿವೃದ್ಧಿಗೊಳಿಸಲು ಮುಂದಾಗಬೇಕಾಗಿದೆ.
– ಎಂ.ಎ.ತಮೀಮ್ ಪಾಷ