Advertisement

ರಾಷ್ಟ್ರೀಯ ಹೆದ್ದಾರಿ ಚರಂಡಿ ನಿರ್ವಹಣೆ ಕೊರತೆ

06:00 AM Jun 05, 2018 | Team Udayavani |

ಕೋಟ: ಕೋಟ ಆಸುಪಾಸಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಇನ್ನೂ ಕೂಡ ನಡೆದಿಲ್ಲ.  ಹೀಗಾಗಿ ರಸ್ತೆಯ ಅಕ್ಕ-ಪಕ್ಕ ಪೊದೆಗಳು ಆವರಿಸಿಕೊಂಡಿವೆ.  ಮಳೆ ನೀರು ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ನುಗ್ಗುವ ಆತಂಕವಿದೆ.

Advertisement

ಕಳೆದ ವರ್ಷ ಮನೆಗಳಿಗೆ ನೀರು ನುಗ್ಗಿತ್ತು
ಕಳೆದ ವರ್ಷ ಚರಂಡಿ ಸಮಸ್ಯೆಯಿಂದಾಗಿ ಹಲವು ಕಡೆ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿತ್ತು. ಸಾಸ್ತಾನ ಹಾಗೂ ಕೋಟದಲ್ಲಿ ವರ್ಷವಿಡೀ ಈ ಸಮಸ್ಯೆ ಮರುಕಳಿಸಿತ್ತು. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದೆ ಇದಕ್ಕೆ ಕಾರಣ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದರಿಂದ ಈ ಬಾರಿ ಕೂಡ ಅದೇ ರೀತಿ ಸಮಸ್ಯೆ ಮರುಕಳಿಸುವ ಸಾಧ್ಯತೆಯಿದೆ.

ಕೆಸರು ನೀರಿನ ಅಭಿಷೇಕ
ರಸ್ತೆಯ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಪಕ್ಕದಲ್ಲಿ  ಕೆಂಪು ಮಣ್ಣಿನಲ್ಲಿ  ನೀರು ನಿಂತು ಕೆಸರು ಗದ್ದೆಯಂತೆ ಮಾರ್ಪಟ್ಟಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರಿಗೆ ನಿತ್ಯ ಕೆಸರು ನೀರಿನ ಅಭಿಷೇಕವಾಗುತ್ತದೆ. ರಸ್ತೆ ಪಕ್ಕದಲ್ಲಿ ಪೊದೆಗಳು ಆವರಿಸಿದ್ದು ನೀರು ಹರಿಯಲು ಸಮಸ್ಯೆಯಾಗುತ್ತಿದೆ.

ಹೊಣೆಗಾರಿಕೆ ಟೋಲ್‌ಗೆ, ಕಿರಿ-ಕಿರಿ ಸ್ಥಳೀಯಾಡಳಿತಕ್ಕೆ 
ರಸ್ತೆ  ನಿರ್ವಹಣೆ ಹೊಣೆ ಟೋಲ್‌ಗ‌ಳನ್ನು ಗುತ್ತಿಗೆ ವಹಿಸಿಕೊಂಡ ಕಂಪೆನಿ ಮಾಡಬೇಕು. ಹೀಗಾಗಿ ಚರಂಡಿ ನಿರ್ವಹಣೆ ಹೊಣೆಗಾರಿಕೆ ಕೂಡ ಅವರದ್ದೇ ಆಗಿದೆ. ಆದರೆ ಸಮಸ್ಯೆ ವಿಪರೀತ ಇರುವ ಕಡೆಗಳಲ್ಲಿ ಜನರು ಸ್ಥಳೀಯಾಡಳಿತಕ್ಕೆ  ದೂರು ಸಲ್ಲಿಸುತ್ತಿರುವುದರಿಂದ ಸಾಲಿಗ್ರಾಮ ಪ.ಪಂ., ಐರೋಡಿ, ಕೋಟ ಗ್ರಾ.ಪಂ. ತಮ್ಮ ಅನುದಾನದಲ್ಲೇ ಅನಿವಾರ್ಯ ಕಡೆಗಳಲ್ಲಿ ಚರಂಡಿ ಸ್ವಚ್ಛಗೊಳಿಸಿತ್ತು.

ಸಮಸ್ಯೆ ಸರಿಪಡಿಸಿ
ರಾಷ್ಟ್ರೀಯ ಹೆದ್ದಾರಿಯ ಚರಂಡಿ ಸಮಸ್ಯೆಯಿಂದಾಗಿ ಕಳೆದ ವರ್ಷ ಹಲವು ಮನೆ, ಕಟ್ಟಡಗಳಿಗೆ  ನೀರು ನುಗ್ಗಿತ್ತು. ಆದರೂ ಇದುವರೆಗೆ ದುರಸ್ತಿಗೆ ಸರಿಯಾದ ಕ್ರಮಕೈಗೊಂಡಿಲ್ಲ.  ಈ ಬಾರಿ ಮಳೆಗಾಲದಲ್ಲೂ ಸಮಸ್ಯೆ ಮರುಕಳಿಸಲಿದೆ. ಸಂಬಂಧಪಟ್ಟವರು ಈ ಕುರಿತು ತತ್‌ಕ್ಷಣ ಗಮನಹರಿಸಬೇಕು.
– ಚಂದ್ರ ಆಚಾರ್ಯ ಕೋಟ, ಸ್ಥಳೀಯ ನಿವಾಸಿ

Advertisement

ಕಾಮಗಾರಿ ಚಾಲ್ತಿಯಲ್ಲಿದೆ
ರಸ್ತೆ ಅಕ್ಕಪಕ್ಕದ ಪೊದೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಅಗತ್ಯ ಕಡೆಗಳಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿ ಈಗಾಗಲೇ ಚಾಲ್ತಿಯಲ್ಲಿದೆ. ಕಾರ್ಮಿಕರ ಕೊರತೆಯಿಂದ ಎಲ್ಲ ಕಡೆಗಳಲ್ಲಿ ಒಂದೇ ಬಾರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಂತ-ಹಂತವಾಗಿ ನಡೆಯಲಿದೆ.
– ರವಿಬಾಬು, ನವಯುಗ ಟೋಲ್‌ ಮ್ಯಾನೇಜರ್‌

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next