Advertisement

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ: ಸಮಸ್ಯೆಗಳ ಆಗರ

02:15 AM Nov 19, 2018 | Team Udayavani |

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ದಿನದಿಂದ ದಿನಕ್ಕೆ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ರಸ್ತೆ ಅಗಲಗೊಳಿಸುವ ಭರದಲ್ಲಿ ಸ್ಥಳೀಯ ವ್ಯವಸ್ಥೆಗಳ ಸರಿಯಾದ ಮಾಹಿತಿ ಪಡೆಯದ ಪರಿಣಾಮ ಕುಂದಾಪುರದಿಂದ ಶಿರೂರಿನವರೆಗೆ ಹತ್ತಾರು ಹಳ್ಳಿಗಳು ಹೆದ್ದಾರಿಯ ಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ.

Advertisement

ಏನು ಸಮಸ್ಯೆ?
ಕುಂದಾಪುರದಿಂದ ಗೋವಾ ಗಡಿಯವರೆಗಿನ ರಾ.ಹೆ. ಚತುಷ್ಪಥ ಕಾಮಗಾರಿ 2015ರಲ್ಲಿ ಪ್ರಾರಂಭಗೊಂಡಿತ್ತು. ಉತ್ತರಕನ್ನಡ ಬಿಟ್ಟರೆ ಉಳಿದ ಬಹುತೇಕ ಭಾಗಗಳಲ್ಲಿ ಮುಕ್ಕಾಲಂಶ ಪೂರ್ಣಗೊಂಡಿದ್ದು, 2019ರ ಒಳಗೆ ಸಂಪೂರ್ಣವಾಗುವ ಸಾಧ್ಯತೆಯಿದೆ. ಈ ಹಂತದಲ್ಲಿ ಒಂದೊಂದೇ ಸಮಸ್ಯೆಗಳು ಬೆಳಕಿಗೆ ಬರುತ್ತಿದ್ದು, ಯೋಜನೆಯ ಆರಂಭದಲ್ಲಿ ಅಧಿಕಾರಿಗಳು ತೋರಿಸಿದ ವಿವರಗಳಿಗೂ ಕಾಮಗಾರಿ ಅನುಷ್ಠಾನಕ್ಕೂ ಅಜಗಜಾಂತರ ಇರುವುದು ಅತ್ಯಂತ ಆತಂಕಕಾರಿ.


ಹೆದ್ದಾರಿ ಅಗಲಗೊಳಿಸಲು ಸರಕಾರಿ ಜಾಗವನ್ನೇ ಬಳಸುವ ಉದ್ದೇಶ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಚಿಂತನೆಯಿಂದಾಗಿ ಹಳ್ಳಿ ರಸ್ತೆಗಳು ಹೆದ್ದಾರಿಯ ನೇರ ಸಂಪರ್ಕವನ್ನು ಕಡಿದುಕೊಳ್ಳುವ ಭೀತಿಯಿದೆ. ಮಾತ್ರವಲ್ಲದೆ, ಒಂದೆರಡು ಕಿ.ಮೀ. ದೂರ ಹೆಚ್ಚುವರಿಯಾಗಿ ಸುತ್ತುಬಳಸಬೇಕಾದ ಸ್ಥಿತಿ ಇದೆ. ಇದರಿಂದಾಗಿ ಉಪ್ಪುಂದ, ಮಧ್ದೋಡಿ, ಕೊಲ್ಲೂರು ಭಾಗದ ಸಂಪರ್ಕ ರಸ್ತೆಗಳು, ಶಿರೂರು ಸಮೀಪದ ತೂದಳ್ಳಿ, ಆಲಂದೂರು, ಜೋಗೂರು, ದೊಂಬೆ -ಕರಾವಳಿ ರಸ್ತೆ, ಕೋಟೆಮನೆ, ಬಿಜೂರು ಸಹಿತ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ಗಳು ಇನ್ನು ಇರುವ ಸಾಧ್ಯತೆಗಳಿಲ್ಲ. ಇಂಥ ಹಲವು ಸಮಸ್ಯೆಗಳು ಸಾರ್ವಜನಿಕರಿಗೆ ಕಗ್ಗಂಟಾಗಿ ಪರಿಣಮಿಸಲಿವೆ.

ಅಪಘಾತ ಹೆಚ್ಚಳ, ಅಪೂರ್ಣ ಕಾಮಗಾರಿ
ಕಾಮಗಾರಿ ಪ್ರಾರಂಭವಾದಂದಿನಿಂದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಶಿರೂರಿನ ಕೆಳಪೇಟೆ ಸಹಿತ ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಗಳಿಗೆ ಅಂಡರ್‌ಪಾಸ್‌ ಇಲ್ಲ. ಹೆದ್ದಾರಿ ದಾಟಿಯೇ ಇನ್ನೊಂದು ಭಾಗಕ್ಕೆ ತೆರಳಬೇಕಾದ ಸ್ಥಿತಿ ಉದ್ಭವಿಸಲಿದೆ. ಕೆಲವು ಪ್ರಮುಖ ಊರುಗಳಲ್ಲಿ ಬಸ್‌ ನಿಲ್ದಾಣ ಇಲ್ಲ. ಮಳೆಗಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಸ್ಥಳೀಯ ಗ್ರಾ.ಪಂ.ಗಳಿಗೂ ಅವರ ವ್ಯಾಪ್ತಿಯ ಚತುಷ್ಪಥ ಕಾಮಗಾರಿ ವಿವರ ಇಲ್ಲದಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ರಸ್ತೆ ಆಗಿಲ್ಲ, ಟೋಲ್‌ಗೇಟ್‌ ಸಿದ್ಧ
ಗುತ್ತಿಗೆ ಪಡೆದ ಕಂಪೆನಿ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಿಲ್ಲ. ಆದರೆ ಟೋಲ್‌ಗೇಟ್‌ ಸಿದ್ಧವಾಗಿರುವುದು ವಿಪರ್ಯಾಸ. ಶಿರೂರಿನ ಆರ್ಮಿ ಬಳಿ ಟೋಲ್‌ಗೇಟ್‌ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಶಿರೂರು ಹಾಗೂ ಭಟ್ಕಳ ಅಂತರ ಕೇವಲ ಆರೇಳು ಕಿ.ಮೀ. ಮಾತ್ರ, ಇಲ್ಲಿನ ಜನರು ವ್ಯವಹಾರಕ್ಕಾಗಿ ದಿನಕ್ಕೆ ನಾಲ್ಕೈದು ಬಾರಿ ಉತ್ತರ ಕನ್ನಡಕ್ಕೆ ಹೋಗಿಬರುತ್ತಾರೆ. ಟೋಲ್‌ ನಿರ್ಮಾಣವಾದರೆ ಗಡಿಭಾಗದ ಗ್ರಾಮಗಳ ಕುರಿತು ಬದಲಿ ವ್ಯವಸ್ಥೆ ಮಾಡಬೇಕಾಗಿದೆ.

Advertisement

ಪ್ರತಿಭಟನೆಗೆ ಸಿದ್ಧತೆ
ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆ ಬಗ್ಗೆ ಚರ್ಚಿಸಲು ಕಾಟಾಚಾರಕ್ಕೆ ಒಂದೆರಡು ಸಭೆಗಳು ನಡೆದಿವೆ. ಎಲ್ಲೂ ಸಾರ್ವಜನಿಕರಿಗೆ ಪೂರ್ಣ ಮಾಹಿತಿ ದೊರೆತಿಲ್ಲ. ಸ್ಪಷ್ಟ ಮಾಹಿತಿ ನೀಡಬೇಕು ಮತ್ತು ಹಳ್ಳಿ ರಸ್ತೆಗಳಿಗೆ ಸಂಪರ್ಕ ಸಮಸ್ಯೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಶಿರೂರಿನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.

ಸಮೀಕ್ಷೆ ನಡೆಸಿ ಸೂಕ್ತ ನಿರ್ಧಾರ 
ಹೆದ್ದಾರಿ ಚತುಷ್ಪಥ ಕುರಿತು ಸಾರ್ವಜನಿಕರ ಸಮಸ್ಯೆಗಳ ಸಮನ್ವಯಕ್ಕಾಗಿ ವಿಶೇಷ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಕಂಪೆನಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ. ಮೇಲಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ಸೂಕ್ತ ನಿರ್ಧಾರ ತೆ‌ಗೆದುಕೊಳ್ಳುತ್ತಾರೆ. ಅಪಘಾತ ನಿಯಂತ್ರಣ ಮತ್ತು ಮುಂಜಾಗ್ರತೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ.
– ಯೋಗೇಂದ್ರಪ್ಪ, ಐ.ಆರ್‌.ಬಿ. ಪ್ರಾಜೆಕ್ಟ್ ಮ್ಯಾನೇಜರ್‌

— ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next