Advertisement

ಟೆಂಡರ್‌, ಡಿಪಿಆರ್‌ಗಳಲ್ಲೇ ಕಳೆದು ಹೋದ ಕಾಮಗಾರಿ

11:03 PM Jan 30, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಸ್ತೆ ಎಂದೇ ಹೆಚ್ಚು ಬಳಕೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-75ರ ದುರಸ್ತಿ ಕಾಮಗಾರಿಗಳು ಟೆಂಡರ್‌, ಡಿಪಿಆರ್‌ಗಳಲ್ಲೇ ಕಳೆದು ಹೋಗಿದ್ದು ಹೆಚ್ಚು. ಕೋಟ್ಯಂತರ ರೂ. ಖರ್ಚು ಮಾಡಿದರೂ “ನೀರಿನಲ್ಲಿ ಹೋಮ’ ಎಂಬಂತಾಗಿದೆ.

Advertisement

ಅಲ್ಲದೇ ಸಂಚಾರ ಮುಕ್ತ ಅನ್ನುವುದಕ್ಕಿಂತ ಸಂಚಾರ ನಿರ್ಬಂಧಕ್ಕೆ “ಶಿರಾಡಿ ಘಾಟ್‌ ರಸ್ತೆ’ ಸದಾ ಸುದ್ದಿಯಲ್ಲಿರುತ್ತದೆ. ಮಳೆಗಾಲ ಬಂದರೆ ಭೂಕುಸಿತ ಮತ್ತಿತರ ಕಾರಣಕ್ಕೆ ಈ ರಸ್ತೆ ಬಂದ್‌ ಆಗುತ್ತದೆ. ಭೂಕುಸಿತದಿಂದ ಆಗುವ ಸಮಸ್ಯೆಗಳನ್ನು ಸರಿಪಡಿಸಿ ಕೊಂಡು ರಸ್ತೆ ಸಂಚಾರಕ್ಕೆ ಮುಕ್ತ ಮಾಡಬೇಕು ಅಂದುಕೊಳ್ಳುವಾಗಲೇ ಮತ್ತೆ ಮಳೆ ಆರಂಭವಾಗುತ್ತದೆ. ಆಗ ಮತ್ತದೇ ಸುದ್ದಿ “ಶಿರಾಡಿ ಘಾಟ್‌’ ರಸ್ತೆಯಲ್ಲಿ ಸಂಚಾರ ಸ್ಥಗಿತ. ಇದರ ನಡುವೆ ರಸ್ತೆ ದುರಸ್ತಿ, ವಿಸ್ತರಣೆ, ಮೇಲ್ದರ್ಜೆ ಎಂಬ “ಧೂಳು’ ಆಗಾಗ ಏಳುತ್ತಿರುತ್ತದೆ. ಇದರ ಮಧ್ಯೆ ಸಾಧಕ-ಬಾಧಕ ವಿಚಾರಗಳನ್ನು ಮುಂದಿಟ್ಟುಕೊಂಡು ಪರಿಸರವಾದಿಗಳು ಆಗಾಗ ಶಿರಾಡಿ ಘಾಟ್‌ “ಹತ್ತುತ್ತಲೇ ಇರುತ್ತಾರೆ’.

ಇದರ ಜೊತೆಗೆ ಸುರಂಗ ನಿರ್ಮಾಣ, ಎಕ್ಸ್‌ಪ್ರೆಸ್‌ ಹೈವೆ, ಸಾಗರಮಾಲ ಯೋಜನೆ ಎಂಬಿತ್ಯಾದಿ ವಿಷಯಗಳು ಶಿರಾಡಿಘಾಟ್‌ ರಸ್ತೆ ಬಗ್ಗೆ ದಶಕಗಳಿಗೂ ಹೆಚ್ಚು ಕಾಲದಿಂದ ಕೇಳಿ ಬರುತ್ತಲೇ ಇವೆ. “ವಿಸ್ತ್ರತ ಯೋಜನಾ ವರದಿ’ (ಡಿಪಿಆರ್‌) ಸಿದ್ಧವಾಗುತ್ತವೆ. ಅದಕ್ಕೆ ತಾಂತ್ರಿಕ ಮತ್ತು ಪರಿಸರ ಕಾರಣಗಳು ಅಡ್ಡಿಯಾಗುತ್ತವೆ. ಟೆಂಡರ್‌ ಕರೆದರೆ ಗುತ್ತಿಗೆದಾರರು ಬರುವುದಿಲ್ಲ. ಬಂದರೂ, ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಇದರಿಂದ ಸಕಾಲದಲ್ಲಿ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಈಗ 1,200 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಇದು ಸಹ ಈ ಎಲ್ಲ ಹಂತಗಳನ್ನು ಎದುರಿಸಬೇಕಾಗುತ್ತದೆ.

ಬಿ.ಸಿ.ರೋಡ್‌-ಅಡ್ಡಹೊಳೆ ಕಾಮಗಾರಿ ಕುಂಠಿತ: ಬಿ.ಸಿ. ರೋಡ್‌-ಅಡ್ಡಹೊಳೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲಾರ್ಸನ್‌ ಆ್ಯಂಡ್‌ ಟಬೋಕಂಪನಿಗೆ ವಹಿಸಲಾಗಿತ್ತು. ಗುತ್ತಿಗೆದಾರರ ಆರ್ಥಿಕ ಮುಗ್ಗಟ್ಟಿನಿಂದ ಕಾಮಗಾರಿ ಕುಂಠಿತಗೊಂಡಿದೆ. ಈಗ ಯೋಜನೆಯನ್ನು ಇ.ಪಿ.ಸಿ ಯೋಜನೆಯಡಿ ಕೈಗೊಳ್ಳಲು 2 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದ್ದು, ಹೊಸದಾಗಿ ಟೆಂಡರ್‌ ಕರೆಯಲಾಗಿದೆ.

ಪೆರಿಯಶಾಂತಿಯಿಂದ ಅಡ್ಡಹೊಳೆವರೆಗೆ
255.703 ಕಿ.ಮೀ. ರಿಂದ 270 ಕಿ.ಮೀ ವರೆಗೆ ಅಡ್ಡಹೊಳೆ (ಗುಂಡ್ಯ ಹತ್ತಿರ) ಯಿಂದ ಬಂಟ್ವಾಳ ಕ್ರಾಸ್‌ ವಿಭಾಗದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 317 ಕೋಟಿ ವೆಚ್ಚದ ಕಾಮಗಾರಿಗೆ ಮೆ.ಎಸ್‌.ಎಂ. ಔತಾಡೆ ಪ್ರೈ.ಲಿ. ಕಂಪೆನಿಗೆಯನ್ನು ಗುರುತಿಸಲಾಗಿದೆ. ಆದರೆ, ಹಣ ಬಿಡುಗಡೆ ಆಗಿಲ್ಲ. ಗುತ್ತಿಗೆದಾರ ಕಂಪೆನಿಗೆ ನೇಮಕಾತಿ ಆದೇಶ ನೀಡಬೇಕಾಗಿದೆ.

Advertisement

ಅಡ್ಡಹೊಳೆಯಿಂದ-ಬಂಟ್ವಾಳದವರೆಗೆ
270.270 ಕಿ.ಮೀ. ರಿಂದ 318.55 ಕಿ.ಮೀ. ವರೆಗೆ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಚತುಷ್ಪಥ ರಸ್ತೆ, ಕಲ್ಲಡ್ಕ ನಗರಕ್ಕೆ ಮೇಲ್ಸೇತುವೆ, 311 ಕಿ.ಮೀ. ರಿಂದ 313 ಕಿ.ಮೀ. ವರೆಗೆ ಅಪ್ರೋಚ್‌ ರಸ್ತೆ ನಿರ್ಮಾಣ ಕಾಮಗಾರಿಗೆ 1,110 ಕೋಟಿ ರೂ. ಯೋಜನಾ ಮೊತ್ತಕ್ಕೆ ಕೆ.ಎನ್‌.ಆರ್‌.ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಗುರುತಿಸಲಾಗಿದೆ. ಆದರೆ, ಹಣ ಬಿಡುಗಡೆ ಆಗಿಲ್ಲ. ಗುತ್ತಿಗೆ ಕಂಪೆನಿಗೆ ನೇಮಕಾತಿ ಆದೇಶ ನೀಡಲಾಗಿಲ್ಲ.

ಸುರಂಗ ಮಾರ್ಗ ಎಂಬ ಅಂಗೈಯಲ್ಲಿ ಆಕಾಶ
ಶಿರಾಡಿ ಘಾಟ್‌ ರಸ್ತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕೇ ಬಿಡ್ತು ಎಂದು ಬಿಂಬಿಸಲಾಗಿದ್ದ ಸುರಂಗ ಮಾರ್ಗ ಅಂಗೈಯಲ್ಲಿ ಆಕಾಶ ಎಂಬಂತಾಗಿದೆ. 2006-07ರಲ್ಲಿ ಪ್ರಸ್ತಾವನೆಗೊಂಡು, 2010ರಲ್ಲಿ ಘೋಷ ಣೆಯಾದ 10 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆ ಇಂದಿಗೂ ನನೆಗುದಿಗೆ ಬಿದ್ದಿದೆ. ಜೈಕಾ ಸಹಭಾ ಗಿತ್ವದ ಈ ಯೋಜನೆಯಡಿ ಶಿರಾಡಿ ಘಾಟ್‌ನಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗೆ 23.57 ಸುರಂಗ ಮಾರ್ಗ ನಿರ್ಮಿಸ ಬೇಕಾಗಿತ್ತು. ಇದರಲ್ಲಿ 6 ಸುರಂಗಗಳು ಮತ್ತು 10 ಸೇತುವೆಗಳು ನಿರ್ಮಾಣ ಆಗಬೇಕಿದೆ. 2020ರಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ, ಇನ್ನೂ ಕಾರ್ಯಗತಗೊಂಡಿಲ್ಲ.

ಭೂಕುಸಿತ: ನಾಲ್ಕನೇ ಟೆಂಡರ್‌
ರಾ.ಹೆ-75 (ಶಿರಾಡಿ ಘಾಟ್‌) ಇದರ ಬಿ.ಸಿ. ರೋಡ್‌-ವೆಲ್ಲೂರ್‌ ರಸ್ತೆಯ ಕಿ.ಮೀ. 59.100 ರಿಂದ (ಅಡ್ಡಹೊಳೆ) ಕಿ.ಮೀ. 85.100 ರವರೆಗೆ (ಮಾರನಹಳ್ಳಿ) ಒಟ್ಟು 26 ಕಿ.ಮೀ. ರಸ್ತೆಯ ಭಾಗವು ರಾಷ್ಟ್ರೀಯ ಹೆದ್ದಾರಿ ವಲಯದ ವ್ಯಾಪ್ತಿ ಯಲ್ಲಿ ಬರಲಿದ್ದು, ವರ್ಷಂ ಪ್ರತಿ ಭೂಕುಸಿತ ದಿಂದಾಗಿ ರಸ್ತೆಗೆ ಅಡಚಣೆ ಉಂಟಾಗಿದ್ದು, ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಪೂರ್ಣಗೊಂಡಿಲ್ಲ. 2021-22ರಲ್ಲಿ 12 ಕಡೆಗಳಲ್ಲಿ ಸಣ್ಣ ಪ್ರಮಾ ಣದ ಭೂಕುಸಿತಗಳು ಉಂಟಾಗಿದ್ದು, ತಕ್ಷಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ 2018-19 ರಲ್ಲಿ 26 ಕಡೆ ಕಣಿವೆ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಶಾಶ್ವತ ದುರಸ್ತಿಗಾಗಿ 36.52 ಕೋಟಿ ರೂ. ವೆಚ್ಚಕ್ಕೆ ಅಂದಾಜು ಸಿದ್ಧಪಡಿಸ ಲಾಗಿದೆ. ಕೇಂದ್ರ ಭೂಸಾರಿಗೆ ಸಚಿವಾಲಯದ ಅನುಮೋದನೆ ಸಿಕ್ಕಿದ್ದು, ಕಾಮಗಾರಿಯ 4ನೇ ಟೆಂಡರ್‌ ಕರೆಯಲಾಗಿದೆ.

ಇದನ್ನೂ ಓದಿ:

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?-  https://bit.ly/354VPOy

ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ-https://bit.ly/34bJ5oO

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು-https://bit.ly/33YQCYz

ಶಿರಾಡಿ ಘಾಟಿ ಕಾಮಗಾರಿ: ರಾಜಕೀಯ ಹಸ್ತಕ್ಷೇಪ ನಿಂತರೆ ಕೆಲಸ ಸುಗಮ-https://bit.ly/3g55Opz

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next