ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಯಂಗ್ ಇಂಡಿಯನ್ ಲಿಮಿಟೆಡ್ ಕಚೇರಿಗೆ ಬೀಗ ಹಾಕಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಒಂದು ವೇಳೆ ನೀವು ಅಮಾಯಕರೇ ಆಗಿದ್ದರೆ ಕಾಂಗ್ರೆಸ್ ಪಕ್ಷ ಯಾಕೆ ಭಯಪಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಗಳೊಂದಿಗೆ ನಿಷೇಧಾಜ್ಞೆ
ಕಾನೂನು ಎಲ್ಲರಿಗೂ ಒಂದೇ. ಪ್ರಕರಣದಲ್ಲಿ ಅಮಾಯಕರೇ ಆಗಿದ್ದರೆ, ಇ.ಡಿ ವಿಚಾರಣೆಯಿಂದ ಭಯಪಡಬೇಕಾದ ಅಗತ್ಯವಿಲ್ಲ. ಬಹುಶಃ ಒಂದು ಕುಟುಂಬವನ್ನು ಹೇಗೆ ರಕ್ಷಿಸಬಹುದು ಎಂಬುದು ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರ ಇಚ್ಛೆಯಾಗಿರಬಹುದು ಎಂದು ಸಂಬಿತ್ ವ್ಯಂಗ್ಯವಾಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಕಟ್ಟಡದಲ್ಲಿರುವ ಯಂಗ್ ಇಂಡಿಯನ್ ಪ್ರೈ ಲಿಮಿಟೆಡ್ ಅನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಬೀಗ ಹಾಕಿರುವ ಘಟನೆ ನಂತರ ಸಂಬಿತ್ ಪಾತ್ರ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಜಾರಿ ನಿರ್ದೇಶನಾಲಯ ಇಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್ ಕಚೇರಿಗೆ ಬರುತ್ತಾರೆಂದ ಮೇಲೆ ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಯಾಕೆ ಹೋಗಲು ಸಾಧ್ಯವಿಲ್ಲ ಎಂದು ಸಂಬಿತ್ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ.