ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಇತ್ತೀಚಿನ ವರದಿಯು ಅನೇಕ ದೃಷ್ಟಿಯಿಂದ ಮಹತ್ವ ಪಡೆದಿದೆ. ಆದಾಗ್ಯೂ 2015-2016ರ 4ನೇ ಸಮೀಕ್ಷೆಯ ಅನಂತರ ಬಂದಿರುವ ಈ 5ನೇ ಸಮೀಕ್ಷೆಯು ಕೋವಿಡ್ ಕಾರಣದಿಂದಾಗಿ ಎಲ್ಲ ರಾಜ್ಯಗಳಲ್ಲೂ ನಡೆದಿಲ್ಲ. ಕರ್ನಾಟಕ ಸೇರಿದಂತೆ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿದೆ. ಮುಂದಿನ ಆರು ತಿಂಗಳುಗಳಲ್ಲಿ ಉಳಿದ ರಾಜ್ಯಗಳಲ್ಲಿನ ಜನಜೀವನದ ವಿಭಿನ್ನ ಕ್ಷೇತ್ರಗಳ ಸಮೀಕ್ಷೆ ನಡೆದು ಪೂರ್ಣ ವರದಿ ಬರುವ ನಿರೀಕ್ಷೆಯಿದೆ. ಆದಾಗ್ಯೂ, ಈಗಿನ ವರದಿಯು ಕೋವಿಡ್ ಬರುವ ಮುನ್ನದ ದಿನಗಳನ್ನು ಆಧರಿಸಿದೆಯಾದರೂ ಹಲವು ಗಮನಾರ್ಹ ವಿಷಯಗಳತ್ತ ಬೆಳಕು ಚೆಲ್ಲುತ್ತಿದೆ.
ಉದಾಹರಣೆಗೆ ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ವಿದ್ಯುತ್ ಸೌಲಭ್ಯ ಪಡೆದ ಕುಟುಂಬಗಳ ಪ್ರಮಾಣ ಅಧಿಕವಾಗಿದೆ. ಇದಷ್ಟೇ ಅಲ್ಲದೇ, ಶುದ್ಧ ಕುಡಿಯುವ ನೀರು ಪಡೆಯುತ್ತಿರುವ ಕುಟುಂಬಗಳ ಸಂಖ್ಯೆಯಲ್ಲೂ ವೃದ್ಧಿಯಾಗಿದೆ. ಇನ್ನು ಶೌಚಾಲಯ ಸೌಲಭ್ಯ ಹಾಗೂ ಸ್ವತ್ಛ ಇಂಧನ ಲಭ್ಯತೆಯ ವಿಚಾರದಲ್ಲೂ ಸಮೀಕ್ಷೆಗೊಳಪಟ್ಟ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಿತಿ ಬಹಳ ಸುಧಾರಿಸಿದೆ.
ಆದರೆ ಇದೇ ವೇಳೆಯಲ್ಲೇ ಈ ವಲಯಗಳಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ ಎನ್ನುವುದೂ ಇದರಿಂದ ವೇದ್ಯವಾಗುತ್ತದೆ. ಉದಾಹರಣೆಗೆ, ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಪ್ರದದ ಹೊರತಾಗಿಯೂ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಹೊಗೆರಹಿತ ಇಂಧನಗಳಿಂದ ವಂಚಿತರಾಗಿದ್ದಾರೆ. ಅಂತೆಯೇ ಸ್ವತ್ಛ ಭಾರತ ಅಭಿಯಾನದಡಿಯಲ್ಲಿ ಬಹುತೇಕ ಜನಸಂಖ್ಯೆಗೆ ಶೌಚಾಲಯ ಸೌಲಭ್ಯ ಸಿಕ್ಕಿದೆಯಾದರೂ ಕಾಲು ಭಾಗದಷ್ಟು ಕುಟುಂಬಗಳ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯಗಳು ಇನ್ನೂ ಇಲ್ಲ. ಇಂಥ ಕುಟುಂಬಗಳು ಸಾಮೂಹಿಕ ಶೌಚಾಲಯಗಳನ್ನು ಅವಲಂಬಿಸಿವೆ. ಈಗಲೂ ಗ್ರಾಮೀಣ ಪ್ರದೇಶಗಳು ಬಯಲುಶೌಚ ಪದ್ಧತಿಯಿಂದ ಮುಕ್ತವಾಗಿಲ್ಲ ಎಂದು ಮಾಧ್ಯಮ ವರದಿಗಳು ಹೇಳುತ್ತಲೇ ಇವೆ. ಎಲ್ಲಕ್ಕಿಂತ ಕಳವಳ ಹುಟ್ಟಿಸುವ ಸಂಗತಿಯೆಂದರೆ, ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆ. 2015-16ರ ಸರ್ವೇಯಲ್ಲಿ ಈ ವಿಷಯದಲ್ಲಿ ಸುಧಾರಣೆ ಕಾಣಿಸಿಕೊಂಡಿತ್ತು. ಅಂದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಆದರೆ ಎನ್‌ಎಫ್ಎಎಚ್‌ಎಸ್ -5(ನೂತನ ವರದಿ) ಪ್ರಕಾರ, 13 ರಾಜ್ಯಗಳಲ್ಲಿ ವಯಸ್ಸಿಗೆ ತಕ್ಕಂಥ ಬೆಳವಣಿಗೆಯಿಲ್ಲದ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ.
ಈ ಕಾರಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯಸರಕಾರಗಳು ಈ ವಿಷಯವನ್ನು ಆದ್ಯತೆಯಾಗಿಸಿಕೊಂಡು ಮಕ್ಕಳ ದೈಹಿಕ ಆರೋಗ್ಯ ಸದೃಢವಾಗುವಂಥ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸುವ ಅಗತ್ಯವಿದೆ. ದೇಶದ ಯಾವ ಮಗುವೂ ಅಪೌಷ್ಟಿಕತೆಯಿಂದ ಬಳಲುವಂತಾಗಬಾರದು. ಇದರ ಜತೆಗೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ವರದಿಯು ಕೆಲವು ರಾಜ್ಯಗಳಲ್ಲಿ ಮಹಿಳೆಯರಲ್ಲಿ ಅತೀಕಡಿಮೆ ಸಾಕ್ಷರತೆ ಪ್ರಮಾಣವಿರುವುದನ್ನೂ ಪತ್ತೆಹಚ್ಚಿದೆ. ಒಟ್ಟಾರೆಯಾಗಿ ಈ ಎಲ್ಲ ಅಂಶಗಳನ್ನು ಆಯಾ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ, ಜನಜೀವನ ಸುಧಾರಿಸುವ ನಿಟ್ಟಿನಲ್ಲಿ ಪೂರಕ ಹೆಜ್ಜೆಗಳನ್ನಿಡಲು ತಡಮಾಡಬಾರದು.