ಬೆಂಗಳೂರು: ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವ ಸಂಬಂಧ ಜ. 24ರಂದು ರಾಜ್ಯದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಮಾಡಲಾಗುತ್ತಿದೆ.
ಹೆಣ್ಣು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಹೆಣ್ಣು ಮಗುವಿನ ದಿನ ಆಚರಣೆ ಮಾಡಲಾಗುತ್ತಿದ್ದು, ತಜ್ಞ ರೇಡಿಯಾಲಜಿಸ್ಟ್‌ಗಳು ರ್ಯಾಲಿ ನಡೆಸಲಿದ್ದಾರೆ. ತಾಯಿಯ ಗರ್ಭದಲ್ಲಿ ಯಾವ ಮಗುವಿದೆ ಎಂಬುದರ ಬಗ್ಗೆ ಬಹಿರಂಗ ಮಾಡುವುದಿಲ್ಲ ಮತ್ತು ಹೆಣ್ಣು ಭ್ರೂಣ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ಸಾರಲಿದ್ದಾರೆ.
ಈ ಆಚರಣೆಯು ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಉತ್ತಮಗೊಳಿಸಲು ಸಹಾಯಕವಾಗಿರುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ತಾರತಮ್ಯ ಹೋಗಲಾಡಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಮೂಲಭೂತ ಹಕ್ಕು ಹಾಗೂ ಸಮಾನ ಶಿಕ್ಷಣ ಪಡೆಯಲು ಈ ಆಚರಣೆ ಅವಶ್ಯಕತೆ ಇದೆ. ಅಲ್ಲದೆ, ಹೆಣ್ಣು ಮಕ್ಕಳ ರಕ್ಷಣೆಯ ಜತೆಗೆ ಉತ್ತಮ ಆರೋಗ್ಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಆರೋಗ್ಯ ಇಲಾಖೆಯ ಪಿಸಿ ಮತ್ತು ಪಿಎನ್‌ಡಿಟಿ ವಿಭಾಗದ ಉಪನಿರ್ದೇಶಕಿ ಡಾ.ಎಂ.ರಜನಿ ತಿಳಿಸಿದ್ದಾರೆ.
ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರತಿ ಹೆಣ್ಣು ಮಗು ಸಮಾಜದಲ್ಲಿ ಸರಿಯಾದ ಗೌರವ ಮತ್ತು ಉತ್ತಮ ಮೌಲ್ಯಗಳನ್ನು ಪಡೆಯುವುದು, ಋತುಸ್ರಾವದ ಶುಚಿತ್ವ ಬಗ್ಗೆ ಅರಿವು ಮೂಡಿಸುವುದು ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು ಆಚರಣೆಯ ಉದ್ದೇಶವಾಗಿದೆ ಎಂದರು.
ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ ಎಂಬ ಸಂದೇಶವನ್ನು ಸರ್ಕಾರ ಸಾರುತ್ತಿದೆ. ಇದಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟುಗೂಡಿ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಸಮಾಜದಲ್ಲಿನ ಕಳಂಕವನ್ನು ನಿರ್ಮೂಲನೆ ಮಾಡಲು ಶ್ರಮವಹಿಸಲಾಗುತ್ತಿದೆ ಎಂದರು.