ಇಂದು ದೇಶಾದ್ಯಂತ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಓದುಗರ ಆಯ್ದ ಲೇಖನ ಇಲ್ಲಿದೆ.
ದೇಶಕ್ಕಾಗಿ ಹೋರಾಡಿದ ವೀರ ವನಿತೆಯರು, ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕಿಯರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ದೇಶ.
ಇತಿಹಾಸದ ಪುಸ್ತಕಗಳಲ್ಲಿ ಓದಿರುವ ಹಾಗೆ ಸ್ವಾತಂತ್ರ್ಯ ಹೋರಾಟದಲ್ಲಿ ಅಮೋಘ ಸಾಧನೆ ವಹಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಭಾಯೀ, ಒನಕೆ ಓಬವ್ವ ಅವರಿಂದ ಹಿಡಿದು ಮದರ್ ತೆರೆಸಾ, ಅನಸೂಯ ಸಾರಾಭಾಯಿ, ಕಮಲಾದೇವಿ ಚಟ್ಟೋಪಧ್ಯಾಯ ರಂತಹ ಸಮಾಜ ಸೇವಕಿಯರಾಗಿರಬಹುದು ಅಥವಾ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಾಕ್ಸರ್ ಮೇರಿ ಕೊಮ್, ಟೆನಿಸ್ ನ ಸಾನಿಯಾ ಮಿರ್ಜಾ, ಕ್ರಿಕೆಟ್ ನ ಮಿಥಾಲಿ ರಾಜ್, ಬ್ಯಾಡ್ಮಿಂಟನ್ ನ ಸೈನಾ ನೆಹ್ವಾಲ್, ಪಿ. ವಿ. ಸಿಂಧು ಹಾಗೂ ಇತರ ಅನೇಕ ಕ್ರೀಡಾಪಟುಗಳನ್ನು ನೆನಪಿಸಿಕೊಳ್ಳಬಹುದು.
ಹಾಗೆಯೇ ವಿಜ್ಞಾನ ಕ್ಷೇತ್ರದಲ್ಲಿ ಮಂಗಳಾ ನಾರ್ಲಿಕರ್, ಪರಮ್ಜಿತ್ ಖುರಾನಾ, ನಂದಿನಿ ಹರಿನಾಥ್, ಕಲ್ಪನಾ ಚಾವ್ಲಾರಂತಹ ಅಪ್ರತಿಮ ಮಹಿಳೆಯರ ಬಗ್ಗೆ ನಾವು ತಿಳಿದಿದ್ದೇವೆ. ಅಷ್ಟೇ ಅಲ್ಲದೆ ಸಾಹಿತ್ಯ, ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿಯೂ ಮಹಿಳೆಯರ ಪಾತ್ರ ಅಗಣ್ಯ. ಸರೋಜಿನಿ ನಾಯ್ಡು ರವರು ಭಾರತದ ಗಾನಕೋಗಿಲೆಯಾಗಿ ಪ್ರಸಿದ್ಧಿಯಾಗಿದ್ದರು.
ಇಂದಿರಾ ಗಾಂಧಿ ಮೊದಲ ಮಹಿಳಾ ಪ್ರಧಾನಿಯಾಗಿ, ಸುಚೇತ ಕೃಪಲಾನಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದರು. ಇನ್ನಿತರ ಕ್ಷೇತ್ರಗಳಲ್ಲೂ ಮೊದಲಿಗರಾಗಿ ಸೇವೆ ಸಲ್ಲಿಸಿದ ಮಹಿಳಾ ಸಾಧಕಿಯರನ್ನು ಹೊಂದಿದ ಭಾರತ ಧನ್ಯ. ನಾವು ಓದಿರದ, ಕಂಡರಿಯದ ಎಷ್ಟೋ ಸಾಧಕಿಯರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇವರೆಲ್ಲರೂ ಭವಿಷ್ಯದ ಸಾಧನೆಯ ಹಾದಿಯಲ್ಲಿರುವ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.
*ಪ್ರಿಯಾಂಕಾ ಶೆಟ್ಟಿ