Advertisement

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ|ಕೆ. ಶಿವನ್‌ ಅಭಿಮತ

10:21 PM Nov 28, 2020 | mahesh |

ಬೆಂಗಳೂರು: “ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ| ಕೆ. ಶಿವನ್‌ ಹೇಳಿದರು.

Advertisement

ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 54ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಬೆಂಗಳೂರು ದೇಶದ ಸಾಫ್ಟ್ವೇರ್‌ಗಳ ರಾಜಧಾನಿಯಾಗಿದೆ. ಆದರೆ, ಕೃಷಿ ವಿಜ್ಞಾನ ಮತ್ತು ಮೀನುಗಾರಿಕೆ ವಿಜ್ಞಾನದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ನಾವು ನಿರೀಕ್ಷೆ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಚೌಕಟ್ಟು ರೂಪಿಸಿ, ಆ ಮೂಲಕ ಐಟಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು’ ಎಂದು ಹೇಳಿದರು.

ಕೃಷಿಯಲ್ಲಿ ಡ್ರೋನ್‌ ಮತ್ತಿತರ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ; ಇದು ಸಾಲದು. ಕೃಷಿ ಅಥವಾ ಮೀನುಗಾರಿಕೆ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಬಿಗ್‌ ಡಾಟಾ ಅನಾಲಿಟಿಕ್ಸ್‌ ಡೊಮೇನ್‌ ಬಳಕೆಗೆ ವಿಪುಲ ಅವಕಾಶಗಳಿವೆ. ಆದರೆ, ಸಾಫ್ಟ್ವೇರ್‌ ಎಂಜಿನಿಯರ್‌ಗಳು ಇದರಲ್ಲಿ ಅಷ್ಟೊಂದು ಪರಿಣಿತರಲ್ಲ. ಆದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೊಂದು ಚೌಕಟ್ಟು ರೂಪಿಸಿ, ಸಮರ್ಪಕ ತಂತ್ರಜ್ಞಾನಗಳ ಬಳಕೆಗೆ ಮುಂದಾಗಬೇಕಿದೆ ಎಂದರು.

ಗ್ರಾಮ ದತ್ತು
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವವಿದ್ಯಾನಿಲಯಗಳಿವೆ. ಇವು ಪ್ರತಿ ವರ್ಷ ಕನಿಷ್ಠ ತಲಾ ನಾಲ್ಕು ಗ್ರಾಮಗಳನ್ನು ದತ್ತು ಪಡೆದು, ಅದನ್ನು ಕೃಷಿ ಜತೆಗೆ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಕೃಷಿಯಲ್ಲಿನ ಸಾಧನೆಗಳು ರೈತರ ಜಮೀನುಗಳನ್ನು ತಲುಪಲು ಇದು ಉತ್ತಮ ಪ್ರಯೋಗ ಎಂದರು.

ಆಹಾರ ಭದ್ರತೆಗೆ ಗಮನ
2030ರ ವೇಳೆಗೆ ವಿಶ್ವದ ಜನಸಂಖ್ಯೆ ಸಾವಿರ ಕೋಟಿ ಆಗಲಿದೆ. ಆಗ ಆಹಾರ ಉತ್ಪಾದನೆ ಪ್ರಮಾಣ ಶೇ. 70ರಷ್ಟು ಹೆಚ್ಚಳ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಭವಿಷ್ಯದಲ್ಲಿ ಎದುರಾಗಬಹುದಾದ ಆಹಾರ ಭದ್ರತೆ ಕಡೆಗೆ ತನ್ನ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next