ಸಾಗರ: ತಾಲೂಕಿನ ಪ್ರತಿಯೊಂದು ಮನೆಗೂ ಉಚಿತವಾಗಿ ರಾಷ್ಟ್ರಧ್ವಜವನ್ನು ನೀಡಲಾಗುತ್ತಿದೆ. ಒಟ್ಟು 77 ಸಾವಿರ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿದ್ದು, ಆ. 11ರಂದು ಶಾಲಾ ಕಾಲೇಜು, ಗ್ರಾಮ ಪಂಚಾಯ್ತಿ ಮತ್ತು ನಗರಸಭೆ ಮಟ್ಟದಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸೋಮವಾರ ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆ. 11ರಂದು ನಡೆಯುವ ರಾಷ್ಟ್ರಧ್ವಜ ವಿತರಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆಗೊಂದು ರಾಷ್ಟ್ರಧ್ವಜ ಮಾತ್ರ ಹಾರಿಸಬೇಕು. ರಾಷ್ಟ್ರಧ್ವಜ ಅಲಂಕಾರಿಕ ವಸ್ತುವಾಗಿ ಬಳಕೆ ಮಾಡಿಕೊಂಡು, ಮನೆಯ ಮೇಲೆ ಎರಡು ಮೂರು ಧ್ವಜ ಹಾರಿಸಿದರೆ ಅದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಹೇಳಿದರು.
ಶಾಲಾಕಾಲೇಜು ಮಕ್ಕಳ ಮೂಲಕ ರಾಷ್ಟ್ರಧ್ವಜವನ್ನು ಪ್ರತಿಮನೆಗೆ ತಲುಪಿಸಲಾಗುತ್ತದೆ. ಮನೆಯಲ್ಲಿ ಎರಡು, ಮೂರು ಜನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಮನೆಗೆ ಎರಡು ಮೂರು ಧ್ವಜವನ್ನು ಮಕ್ಕಳು ತೆಗೆದುಕೊಂಡು ಬಂದಿದ್ದರೆ ಪೋಷಕರು ಅಕ್ಕಪಕ್ಕದ ಮನೆಗಳಿಗೆ ಹೆಚ್ಚುವರಿ ಧ್ವಜವನ್ನು ಕೊಡುವ ಮೂಲಕ ಮನೆಮನೆಯ ಮೇಲೂ ರಾಷ್ಟ್ರಧ್ವಜ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಯಾರಿಗೆ ರಾಷ್ಟ್ರಧ್ವಜ ಸಿಕ್ಕಿಲ್ಲ ಎಂದು ಕರೆ ಮಾಡಿದರೆ ಅರ್ಧ ಗಂಟೆಯಲ್ಲಿ ಅವರ ಮನೆಗೆ ರಾಷ್ಟ್ರಧ್ವಜ ತಲುಪಿಸುವ ಕೆಲಸ ಮಾಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ 50 ರಾಷ್ಟ್ರ ಧ್ವಜವನ್ನು ದಾಸ್ತಾನು ಇರಿಸಲಾಗುತ್ತಿದೆ ಎಂದು ಹೇಳಿದರು.
ಸಾಗರ ಹೊಸನಗರ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 60 ಸಾವಿರ ಕುಟುಂಬ ಇದೆ. ಆಡಳಿತದ ವತಿಯಿಂದ 77 ಸಾವಿರ ಸಿದ್ಧಪಡಿಸಿದೆ. ರಾಷ್ಟ್ರಧ್ವಜ ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಶಾಲಾಕಾಲೇಜು ವಿದ್ಯಾರ್ಥಿಗಳು, ವಿವಿಧ ಸ್ತ್ರೀಶಕ್ತಿ ಸಂಘಗಳು, ಸರ್ಕಾರಿ ನೌಕರರು ಧ್ವಜ ತಯಾರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. 37 ಸಾವಿರ ಧ್ವಜವನ್ನು ಸ್ಥಳೀಯ ಸಂಸ್ಥೆಗಳ ಅನುದಾನದಿಂದ ತಯಾರಿಸಿದ್ದು, ಉಳಿದ ೪೦ ಸಾವಿರ ಧ್ವಜವನ್ನು ದಾನಿಗಳಿಂದ, ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವ ಮೂಲಕ ಸಿದ್ದಪಡಿಸಲಾಗಿದೆ. ಮನೆಮನೆ ಮೇಲೂ ರಾಷ್ಟ್ರಧ್ವಜ ಕಾರ್ಯಕ್ರಮ ಅತ್ಯಂತ ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯ ಗಣೇಶಪ್ರಸಾದ್, ಪ್ರಮುಖರಾದ ರವೀಂದ್ರ ಬಸ್ರಾಣಿ, ನಾಗರಾಜ್ ವಾಟೆಮಕ್ಕಿ ಇನ್ನಿತರರು ಹಾಜರಿದ್ದರು.