ವಿಜಯಪುರ: ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ ಸಿದ್ಧೇಶ್ವರ ಶ್ರೀಗಳಿಗೆ ಸರ್ಕಾರದ ಪರವಾಗಿ ಜಿಲ್ಲಾಡಳಿತ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದೆ. ಮತ್ತೊಂದೆಡೆ ಶ್ರೀಗಳ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಸೈನಿಕ ಶಾಲೆಯತ್ತ ಧಾವಿಸಿ ಬರುತ್ತಿದ್ದಾರೆ.
ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ, ಎಸ್ಪಿ ಆನಂದ ಕುಮಾರ ಶ್ರೀಗಳ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದರು.
ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ಭಕ್ತರ ಅಂತಿಮ ದರ್ಶನಕ್ಕಾಗಿ ಜ್ಞಾನ ಯೋಗಾಶ್ರಮದಿಂದ ಸೈನಿಕ ಶಾಲೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಶ್ರೀಗಳ ಅಂತಿಮ ದರ್ಶನ ಪಡೆಯಲು ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಸೈನಿಕ ಶಾಲೆಯ ಆವರಣಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದಲೂ ಸಿದ್ದೇಶ್ವರ ಶ್ರೀಗಳ ಭಕ್ತರು ವಿಜಯಪುರ ನಗರದತ್ತ ಸಾಗಿ ಬರುತ್ತಿದ್ದಾರೆ.
ಸೈನಿಕ ಶಾಲೆ ಪ್ರವೇಶಕ್ಕೆ ಮುನ್ನವೇ ಇಟಗಿ ಪೆಟ್ರೋಲ್ ಬಂಕ್, ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರದಲ್ಲೇ ಪೊಲೀಸ್ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸೈನಿಕ ಶಾಲೆ ಪ್ರವೇಶಕ್ಕೆ ಮುನ್ನವೇ ನಗರದ ಪ್ರವೇಶಿಸುವ ರಸ್ತೆಗಳಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸೋಲಾಪುರ ರಸ್ತೆ, ಅಥಣಿ ರಸ್ತೆ, ಸಿಂದಗಿ ನಾಕಾ, ಹುಬ್ಬಳ್ಳಿ ಭಾಗದಿಂದ ಬರುವವರಿಗೆ ಬಾಗಲಕೋಟ ಕ್ರಾಸ್, ಬಬಲೇಶ್ವರ ಕ್ರಾಸ್ ಸೇರಿದಂತೆ ಇತರೆ ವಾಹನ ನಿಲುಗಡೆಗೆ ಹಾಗೂ ಮಾರ್ಗಗಳಲ್ಲಿ ಸ್ಥಳೀಯರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.