Advertisement
ಹೌದು, ರಾಷ್ಟ್ರಧ್ವಜಕ್ಕಾಗಿ ಇಡೀ ಜೀವನವನ್ನು ತೇಯ್ದ ಹತ್ತಿ ನೂಲುವವರು, ಖಾದಿ ಬಟ್ಟೆ ನೇಯುವವರು ಮತ್ತು ಖಾದಿ ಸೇವಕರ ಬದುಕೇ ಇಂದು ಅತಂತ್ರ ಸ್ಥಿತಿಯಲ್ಲಿ ನೇತಾಡುತ್ತಿದೆ.
ಧಾರವಾಡದಲ್ಲಿ ಅಪ್ಪಟ ದೇಸಿ ಖಾದಿ ಉತ್ಪಾದಿಸುತ್ತಿದ್ದ ಗರಗ, ಹೆಬ್ಬಳ್ಳಿ, ಉಪ್ಪಿನಬೇಟಗೇರಿ, ಅಮ್ಮಿನಬಾವಿ ಮತ್ತು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸೇವಾ ಸಂಘಗಳು ಒಂದೊಂದಾಗಿ ಬಾಗಿಲು ಹಾಕುತ್ತಿವೆ. ಈ ಐದು ಪ್ರಮುಖ ಸೇವಾ ಕೇಂದ್ರಗಳಲ್ಲಿ ಕೇವಲ 10 ವರ್ಷಗಳ ಹಿಂದೆ ಅಂದರೆ 2013ರಲ್ಲಿ ಖಾದಿ ನೂಲುವವರು, ನೇಯುವವರು ಮತ್ತು ಸೇವಕರು ಈ ಮೂರು ವಿಭಾಗದಲ್ಲಿ 5,600ಕ್ಕೂ ಅಧಿಕ ಖಾದಿ ಸೇವಕರಿದ್ದರು. ಈಗ ಕೇವಲ 780 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ.
Related Articles
Advertisement
ಖಾದಿಗೂ ಜಿಎಸ್‌ಟಿ ನೋಟಿಸ್:ಸರ್ಕಾರ ಇದೀಗ ಖಾದಿ ಗ್ರಾಮೋದ್ಯೋಗವನ್ನು ಸಂಪೂರ್ಣ ನಿರ್ಲಕ್ಷé ಮಾಡಿದ್ದು ಸಾಲದೆಂಬಂತೆ ಕೊಡುವ ರಿಬೇಟ್ ಅನ್ನು ಸರಿಯಾಗಿ ಕೊಡುತ್ತಿಲ್ಲ. ಅಷ್ಟೇ ಅಲ್ಲ, ಖಾದಿ ಬಟ್ಟೆ, ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಈ ಸಂಬಂಧ ಈಗಾಗಲೇ ಖಾದಿ ಸೇವಾ ಕೇಂದ್ರಗಳಿಗೆ ನೋಟಿಸ್ ಜಾರಿಗೊಳಿಸಿದೆ. ಖಾದಿ ಸಿದ್ಧಗೊಳ್ಳಲು ಬೇಕಾಗುವ ಕಚ್ಚಾ ವಸ್ತುವಿನ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲು ಷಡ್ಯಂತ್ರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಖಾದಿ ಸೇವಾ ಕೇಂದ್ರಗಳೆಲ್ಲವೂ ಸೇರಿಕೊಂಡು ಇದನ್ನು ಬಲವಾಗಿ ವಿರೋಧಿಸಿ ಖಾದಿ ರಕ್ಷಿಸುವಂತೆ ಆಗ್ರಹಿಸಲು ಕಳೆದ ಜು.28ರಂದು ಬೆಂಗಳೂರಿನ ಕೆವಿಐಸಿಯಲ್ಲಿ ಸಭೆ ನಡೆಸಿ ಖಾದಿ ಗ್ರಾಮೋದ್ಯೋಗ ಸಂಘಟನೆಗಳ ಉಪ ಸಮಿತಿ ರಚಿಸಿ ಹೋರಾಟಕ್ಕೆ ಸಜ್ಜಾಗುತ್ತಿವೆ. ಇನ್ನೂ ಬಂದಿಲ್ಲ ಎಂಡಿಎ ಬಾಕಿ:
ಖಾದಿ ಗ್ರಾಮೋದ್ಯೋಗದ ಅಭಿವೃದ್ಧಿಗೆ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆ ಅಭಿವೃದ್ಧಿ ನಿಧಿ ನೀಡುತ್ತಾ ಬಂದಿದೆ. ರಾಜ್ಯದ ಎಲ್ಲಾ ಖಾದಿ ಸೇವಾ ಕೇಂದ್ರಗಳಿಗೆ ವರ್ಷಕ್ಕೆ 60 ಕೋಟಿ ರೂ. ಧನಸಹಾಯ ನೀಡುವ ಸರ್ಕಾರ, ಕಳೆದ 2 ವರ್ಷಗಳಿಂದ ಅದನ್ನು ಕೂಡ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಕೇಂದ್ರ ಸರ್ಕಾರ ಶೇ.35ರಷ್ಟು ಧನಸಹಾಯ ನೀಡಿದರೆ, ರಾಜ್ಯ ಸರ್ಕಾರ ಕೇವಲ ಶೇ.15ರಷ್ಟು ಮಾತ್ರ ನೀಡುತ್ತಿದೆ. ಇದನ್ನು ಕೇಂದ್ರದಂತೆ ಶೇ.35ಕ್ಕೆ ಏರಿಸಬೇಕು ಎನ್ನುವ ಗಾಂಧಿವಾದಿಗಳ ಮನವಿಯನ್ನು ರಾಜ್ಯ ಸರ್ಕಾರ ಇನ್ನೂ ಪುರಸ್ಕರಿಸುತ್ತಿಲ್ಲ. ಕಚ್ಚಾ ಮಾಲು ಸಿಗುತ್ತಿಲ್ಲ
ಖಾದಿ ನೇಯುವವರಿಗೆ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನ ಮಾದರಿಯಲ್ಲೇ ಪ್ರತಿ ಮೀಟರ್ ನೇಯ್ಗೆ ಮೇಲೆ ಧನಸಹಾಯ ನೀಡುತ್ತಿದೆ. 2018ರಲ್ಲಿ ಸಿದ್ದು ಸರ್ಕಾರ 380 ಕೋಟಿ ರೂ. ಅನುದಾನ ನೀಡಿದ್ದು ಬಿಟ್ಟರೆ ಮತ್ತೆ ಅನುದಾನ ಬಂದಿಲ್ಲ. ಪ್ರತಿದಿನ ಒಬ್ಬ ನೂಲುವವ, ನೇಯುವವ ಮತ್ತು ಸೇವಕನಿಗೆ 175 ರೂ.ನಿಂದ 200ರೂ.ಗಳಷ್ಟು ಸಂಬಳ ಸಿಕ್ಕರೆ ಅದೇ ಹೆಚ್ಚು. ಇನ್ನು ಪಿಎಫ್ ಸೇರಿ ಯಾವುದೇ ಸೌಲಭ್ಯಗಳೂ ಇಲ್ಲ. ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ಚಿತ್ರದುರ್ಗದ ರಾಷ್ಟ್ರೀಯ ಘಟಕ ಬಂದ್ ಆಗಿ ಎರಡು ವರ್ಷ ಕಳೆದಿದ್ದು, ಕಚ್ಚಾಮಾಲು ಸಿಗದೆ ಖಾದಿ ಮಗ್ಗಗಳು ಮುಚ್ಚುತ್ತಿವೆ. ಪ್ಲಾಸ್ಟಿಕ್ ಮತ್ತು ಪಾಲಿಸ್ಟರ್ ಬಿಟ್ಟು ಬರೀ ಖಾದಿ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಿದರೆ, ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಖಾದಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಖಾದಿ ಗ್ರಾಮೋದ್ಯೋಗ ಇನ್ನಷ್ಟು ತಲೆ ಎತ್ತಿ ನಿಲ್ಲುತ್ತದೆ. ಆದರೆ ಸರ್ಕಾರ ಈ ಕೆಲಸ ಮಾಡದಿರುವುದು ದುರಂತ.
– ನರಹರಿ ಕಾಗಿನೆಲಿ, ಧಾರವಾಡ ಖಾದಿ ಸೇವಾ ಸಂಘ ಕಾರ್ಯದರ್ಶಿ -ಬಸವರಾಜ್ ಹೊಂಗಲ್