Advertisement
ಮಾಮ್ ಸಿನಿಮಾಗಾಗಿ ನಟಿ ಶ್ರೀದೇವಿಗೆ ಘೋಷಿಸಲಾದ ಪುರಸ್ಕಾರವನ್ನು ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಮತ್ತು ಖುಷಿ ಸ್ವೀಕರಿಸಿದರು. ವಿನೋದ್ ಖನ್ನಾಗೆ ಘೋಷಿಸಲಾದ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಅಕ್ಷಯ್ ಖನ್ನಾ ಮತ್ತು ಕವಿತಾ ಖನ್ನಾ ಸ್ವೀಕರಿಸಿದರು. ಇವರೂ ಸೇರಿ 11 ಗಣ್ಯರಿಗೆ ಕೋವಿಂದ್ ಪ್ರಶಸ್ತಿ ನೀಡಿದರು.ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್ ಹಾಗೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರೂ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಲಯಾಳಂ ನಿರ್ದೇಶಕ ಜಯರಾಜ್, ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆ ಸಹಿತ ಹಲವರು ಸಮಾರಂಭಕ್ಕೆ ಗೈರಾಗಿದ್ದಾರೆ. ಪ್ರತಿಭಟನಾರ್ಥವಾಗಿ ಕಳುಹಿಸಿದ ಪತ್ರಕ್ಕೂ ಸಹಿ ಹಾಕಿದ್ದಾರೆ. ಈ ಪತ್ರಕ್ಕೆ ಯೇಸುದಾಸ್ ಕೂಡ ಸಹಿ ಹಾಕಿದ್ದಾರೆ. ರಾಷ್ಟ್ರಪತಿ ಕಾರ್ಯಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ 1 ಗಂಟೆಗಿಂತ ಹೆಚ್ಚು ಕಾಲ ಕೋವಿಂದ್ ಅವರು ಹಿಂದಿನಿಂದಲೂ ಭಾಗವಹಿಸುತ್ತಿಲ್ಲ ಎಂದು ಹೇಳಿದೆ.
65ನೇ ರಾಷ್ಟ್ರಪ್ರಶಸ್ತಿ ವಿಜೇತರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡದಿರುವುದನ್ನು ಕರ್ನಾಟಕದ ಪ್ರಶಸ್ತಿ ವಿಜೇತರು ಕೂಡ ವಿರೋಧಿಸಿದ್ದಾರೆ. 65ನೇ ರಾಷ್ಟ್ರಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಮೂರು ಪ್ರಶಸ್ತಿಗಳು ಬಂದಿದ್ದವು. ವಿಜೇತರಾದ ನಿರ್ದೇಶಕ ನಂಜುಂಡೇಗೌಡ, ಅಭಯ್ ಸಿಂಹ ಹಾಗೂ ಗೀತರಚನೆಕಾರ ಜೆ.ಎಂ.ಪ್ರಹ್ಲಾದ್ ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ತೆರಳಿದ್ದರು. ಆದರೆ, ವಿವಾದದ ಹಿನ್ನೆಲೆಯಲ್ಲಿ ಇವರೂ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಈ ಕುರಿತು ‘ಉದಯವಾಣಿ’ ಜತೆ ಮಾತನಾಡಿದ “ಪಡ್ಡಾಯಿ’ ನಿರ್ದೇಶಕ ಅಭಯ್ ಸಿಂಹ, ‘ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸದಿರುವುದು ಬೇಸರವಾಗಿದೆ. ಹೀಗಾಗಿ ಸಮಾರಂಭಕ್ಕೆ ಹೋಗದೆ, ಬೆಂಗಳೂರಿಗೆ ವಾಪಸ್ ಆಗುತ್ತೇವೆ’ ಎಂದಿದ್ದಾರೆ.