ರಿಯಾಧ್ : ಕೇಂದ್ರ ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಅವರ ಅಬುಧಾಬಿ ಭೇಟಿಯ ವೇಳೆ ದೇಶದ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಹಾರಿಸಲಾದ ಘಟನೆ ನಡೆದಿದೆ. ಅಮೆಜಾನ್ ಡಾಟ್ ಕಾಮ್ ಪ್ರಮಾದದ ಬಳಿಕ ಭಾರತಕ್ಕೆ ತೀವ್ರ ಇರಿಸು ಮುರಿಸು ಉಂಟುಮಾಡಿರುವ ಎರಡನೇ ಘಟನೆ ಇದಾಗಿದೆ.
ಸಚಿವ ಗೋಯಲ್ ಅವರ ನಿನ್ನೆ ಸೋಮವಾರ ಅಬುಧಾಬಿಯ ವಿದ್ಯುತ್ ಸಚಿವರೊಂದಿಗೆ ದುಂಡು ಮೇಜಿನ ಸಮಾವೇಶ ನಡೆಸಿದ್ದರು. ನವೀಕರಿಸಬಲ್ಲ ಇಂಧನ ಕುರಿತಾದ ಮೊತ್ತ ಮೊದಲ ಭಾರತ ನಿರ್ದಿಷ್ಟ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ್ದರು.
ಭಾರತವು ಸೌರ ಶಕ್ತಿ ಬಳಕೆಯಲ್ಲಿ ಭಾರೀ ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗಿದೆ. 2022ರೊಳಗೆ 100 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿ ಸಾಧಿಸಿದ ಬಳಿಕ ಅದು ಸುಮ್ಮಗಿರುವುದಿಲ್ಲ; ಈ ಕ್ಷೇತ್ರದಲ್ಲಿ ಭಾರತವು ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಸಚಿವ ಗೋಯಲ್ ಹೇಳಿದ್ದರು.
ಈ ಸಮಾವೇಶದ ಬಳಿಕ ಸೌದಿ ಮಾಧ್ಯಮ ಸಂಸ್ಥೆಯಿಂದ ಟ್ವಿಟರ್‌ನಲ್ಲಿ ಹಾಕಲ್ಪಟ್ಟ ಫೋಟೋದಲ್ಲಿ ಭಾರತದ ಧ್ವಜವನ್ನು ತಲೆ ಕೆಳಗಾಗಿ ಹಾರಿಸಲಾದದ್ದು ಕಂಡು ಬಂದಿತ್ತು.
ಕೆಲ ದಿನಗಳ ಹಿಂದಷ್ಟೇ ಆನ್‌ಲೈನ್ ಶಾಪಿಂಗ್ ದಿಗ್ಗಜ ಸಂಸ್ಥೆಯಾಗಿರುವ ಅಮೆರಿಕದ ಅಮೆಜಾನ್ ಡಾಟ್ ಕಾಮ್, ಭಾರತದ ತ್ರಿವರ್ಣ ಧ್ವಜದ ಚಿತ್ರವಿರುವ ನೆಲ ಹಾಸನ್ನು ತನ್ನ ಮಾರಾಟ ಜಾಲದಲ್ಲಿ ಹಾಕಿತ್ತು. ಕೇಂದ್ರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಈ ಬಗ್ಗೆ ಗರಂ ಆಗಿ ಅಮೆಜಾನ್‌ಗೆ ಬಿಸಿ ಮುಟ್ಟಿಸಿದ ಬಳಿಕ ಅಮೆಜಾನ್ ತನ್ನ ಜಾಲ ತಾಣದಿಂದ ತ್ರಿವರ್ಣ ಧ್ವಜದ ಚಿತ್ರವಿರುವ ಡೋರ್ ಮ್ಯಾಟನ್ನು ತೆಗೆದು ಹಾಕಿತು.
2015ರ ನವೆಂಬರ್‌ನಲ್ಲಿ ಮಲೇಶ್ಯದಲ್ಲಿ ನಡೆದಿದ್ದ ಆಸಿಯಾನ್ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೇ ಅವರೊಂದಿಗೆ ನಡೆಸಿಕೊಟ್ಟ ಫೋಟೋ ಸೆಶನ್ಸ್ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ಪ್ರಧಾನಿ ಮೋದಿ ಅವರು ತತ್‌ಕ್ಷಣವೇ ಅದನ್ನು ಗುರುತಿಸಿ ಸಂಘಟಕರಿಂದಾದ ಪ್ರಮಾದವನ್ನು ಸರಿಪಡಿಸಿದ್ದರು.