ಹೊಸದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ನ. 4 ರಿಂದ 9 ರವರೆಗೆ ನಡೆಯಲಿದೆ ಎಂದು ಶ್ರೀ ಶಿವಕುಮಾರ ಕಲಾ ಸಂಘದ ಅಧ್ಯಕ್ಷರೂ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ, ವಿಚಾರಸಂಕಿರಣ,ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸೇರಿದಂತೆ ನಾಟಕ ಪ್ರದರ್ಶನ ನಡೆಯಲಿದೆ. ನ. 4 ರಂದು ರಾಷ್ಟ್ರೀಯ ನಾಟಕೋತ್ಸವಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಚಾಲನೆ ನೀಡುವರು.
ಕನ್ನಡ ರಾಜ್ಯೋತ್ಸವದ ಉದ್ಘಾಟನೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಿವಸಂಚಾರ 18ರ ನಾಟಕಗಳ ಉದ್ಘಾಟನೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ನಾಗಮೋಹನದಾಸ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ನ. 9 ರ ಸಮಾರೋಪದಲ್ಲಿ ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಅವರಿಗೆ “ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ
ಮಾಡಲಾಗುವುದು. ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ,ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಗೂಳಿಹಟ್ಟಿ ಶೇಖರ್ ಇತರರು ಭಾಗವಹಿಸುವರು ಎಂದರು.