ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಗಾಗಿ ಜ.27ರಂದು ಕೇಂದ್ರ ಸರಕಾರ ಮಾಡಿಕೊಂಡ ಒಪ್ಪಂದ ಧನಾತ್ಮಕ ಪರಿಣಾಮ ಬೀರಲಾರಂಭಿಸಿದೆ. ರಾಜ್ಯದ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ನ್ಯಾಷನಲ್ ಡೆಮಾಕ್ರಾಟಿಕ್ ಫ್ರಂಟ್ ಆಫ್ ಬೋಡೋ ಲ್ಯಾಂಡ್ (ಎನ್‌ಡಿಎಫ್ಬಿ) ಸ್ಥಾಪನೆಗೊಂಡು 34 ವರ್ಷಗಳ ಬಳಿಕ ವಿಸರ್ಜನೆಗೊಂಡಿದೆ, ಎರಡು ಸ್ಥಳಗಳಲ್ಲಿ ಈ ಪ್ರಕ್ರಿಯೆ ನಡೆದಿತ್ತು.
ಈಶಾನ್ಯ ರಾಜ್ಯಗಳಲ್ಲಿಯೇ ಅದು ಅತ್ಯಂತ ದೊಡ್ಡದಾದ ಮತ್ತು ಭೀಕರ ರೀತಿಯಲ್ಲಿ ಹಿಂಸಾಕೃತ್ಯಗಳನ್ನು ನಡೆಸುವ ಕುಖ್ಯಾತಿಗೆ ಅದು ಒಳಗಾಗಿತ್ತು. ಒಪ್ಪಂದದ ಅನ್ವಯ ವಿಸರ್ಜನೆಗೆ ಒಳಗಾಗಿರುವ ಎರಡನೇ ಉಗ್ರ ಸಂಘಟನೆ ಎನ್‌ಡಿಎಫ್ಬಿ.
ಜ.27ರಂದು ಎನ್‌ಡಿಎಫ್ಬಿಯ ನಾಲ್ಕು ಗುಂಪುಗಳು ತಮ್ಮೆಲ್ಲ ಭಿನ್ನಾಭಿಪ್ರಾಯ ಮರೆತು, ಸರಕಾರದ ಜತೆಗೆ ಶಾಂತಿ ಸ್ಥಾಪನೆ ಮತ್ತು ಸಂಘಟನೆ ಮುಂದುವರಿಸದೇ ಇರುವ ಬಗ್ಗೆ ಸಹಮತಕ್ಕೆ ಬಂದು, ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ಸಂಘಟನೆ ರಾಜಕೀಯ ಶಕ್ತಿ ಪಡೆದುಕೊಳ್ಳಲು ಪಕ್ಷ ಸ್ಥಾಪನೆ ಮಾಡದಿರಲೂ ನಿರ್ಧರಿಸಿದೆ. ಬೋಡೋ ಜನರ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು 1986ರಲ್ಲಿ ಸಂಘಟನೆ ರೂಪುಗೊಂಡಿತ್ತು.
ಹಿಂದಿನ ಸಂದರ್ಭಗಳಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ನ ಸೇನಾ ಭಾಗವಾಗಿದ್ದ ಮಿಜೋ ನ್ಯಾಷನಲ್ ಆರ್ಮಿ ನಾಲ್ಕು ದಶಕಗಳ ಹಿಂದೆ ಸಹಿ ಹಾಕಲಾಗಿದ್ದ ಮಿಜೋ ಒಪ್ಪಂದದ ಬಳಿಕ ವಿಸರ್ಜನೆಗೊಂಡಿತ್ತು.
2002ರಲ್ಲಿ ಬೋಡೋ ಲಿಬರೇಷನ್ ಟೈಗರ್ಸ್ ಎಂಬ ಸಂಘಟನೆ ಎರಡನೇ ಬೋಡೋ ಒಪ್ಪಂದದ ಬಳಿಕ ಸಂಘಟನೆಯನ್ನು ಮುಂದುವರಿಸದಿರಲು ನಿರ್ಧರಿಸಲಾಗಿತ್ತು.