ಮಂಗಳೂರು: ರಾಷ್ಟ್ರೀಯ ಗ್ರಾಹಕರ ಮೇಳ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸೆ. 1 ರಂದು ಸಂಜೆ 6 ಗಂಟೆಗೆ ಶುಭಾರಂಭಗೊಳ್ಳಲಿದೆ.
ಎನ್‌ಸಿಎಫ್ ಸಂಘಟನೆಯು ಮೇಳವನ್ನು ಸಂಘಟಿಸುತ್ತಿದೆ. ಮಂಗಳೂರಿಗೆ ಸ್ನೋವರ್ಲ್ಡ್, ಅಕ್ವಾ ಶೋ, ಬರ್ಡ್ ಶೋ, ತಾಜ್‌ಮಹಲ್‌ನಂತಹ ವಿನೂತನ ರೀತಿಯ ಮೆಗಾಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಸ ಶೋಗಳನ್ನು ನೀಡುತ್ತಿದ್ದು, ಯಶಸ್ವಿ ಹತ್ತನೇ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನೋರಂಜನಾ ಮೇಳವಾಗಿರುತ್ತದೆ. ಈ ಬಾರಿ ಅತೀ ದೊಡ್ಡ ಐಫೆಲ್ ಗೋಪುರದ ಪ್ರತಿಕೃತಿ ಮತ್ತು ರೊಬೊಟ್ ಪ್ರಾಣಿಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದರ ಎದುರು ಸೆಲ್ಫಿà ಕ್ಲಿಕ್ಕಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಕಲಾವಿದ ಶೇಖರ್ ಅವರ ಕೊಡುಗೆಯಾದ 90 ಅಡಿ ಎತ್ತರದ ಉಕ್ಕಿನ ಐಫೆಲ್ ಗೋಪುರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದ್ದು, 20 ಟನ್ ಉಕ್ಕಿನಿಂದ ನಿರ್ಮಾಣಗೊಂಡ ಈ ಪ್ರತಿಕೃತಿ ಕರಾವಳಿ ವಸ್ತು ಪ್ರದರ್ಶನ ಮೈದಾನದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ನೈಜ ಗಾತ್ರದ ರೊಬೊಟ್ ಪ್ರಾಣಿಗಳ ಪ್ರದರ್ಶನ, ವಿವಿಧ ಖಂಡದ ವನ್ಯಮೃಗಗಳನ್ನು ಒಂದೇ ಮೃಗಾಲಯದಲ್ಲಿ ವೀಕ್ಷಣೆಗೆ ಅವಕಾಶವಿದೆ. ಇದು ಸಹಜ ಎನಿಸುವ ಪ್ರಾಣಿಗಳ ಚಲನೆ ಹಾಗೂ ಶಬ್ದ ನೈಜತೆಯ ಅನುಭವ ನೀಡುತ್ತದೆ.
ಆಫ್ರಿಕಾದ ದಟ್ಟ ಕಾಡಿನ ಆನೆಗಳಿಂದ ಹಿಡಿದು ಜೀಬ್ರಾ, ಚೈನೀಸ್ ಪಾಂಡಾ, ಅಸ್ಸಾಂನ ಖಡ್ಗಮೃಗ, ಅಟ್ಲಾಂಟಿಕ್ ಸಾಗರದ ಶಾರ್ಕ್, ಬಂಗಾಲದ ಬಿಳಿ ಹುಲಿ, ನೀರಾನೆ, ಕಿಂಗ್‌ಕಾಂಗ್, ಗುಜರಾತಿನ ಸಿಂಹ, ಕೆಂಪು ಸಮುದ್ರದ ಡಾಲ್ಫಿನ್, ಕರಡಿ, ಹಾವು, ಮೊಸಳೆ, ಪಶ್ಚಿಮ ಬಂಗಾಳದ ಆನೆಗಳ ಪರಿವಾರ ಈ ಪ್ರದರ್ಶನದ ಮುಖ್ಯ ಆಕರ್ಷಣೆ. ಪ್ರತ್ಯೇಕವಾಗಿ ಆಯೋಜಿಸಿರುವ ಜಲಚರ ಹಾಗೂ ಪಕ್ಷಿ ಪ್ರದರ್ಶನ ಪ್ರಪಂಚದ ಜೀವ ವೈವಿಧ್ಯತೆಯನ್ನು ಬಿಂಬಿಸಲಿದೆ.
ಅಲ್ಲದೇ ವಿವಿಧ ವ್ಯಾಪಾರ ಮಳಿಗೆಗಳಿದ್ದು, ವಿಶೇಷ ಮತ್ತು ಅಧಿಕ ರಿಯಾಯಿತಿ ದರದಲ್ಲಿ ಉತ್ಪನ್ನಗಳು ಲಭ್ಯವಿವೆ. ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈ ಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಸೇರಿದಂತೆ ವಿವಿಧ ಉತ್ಪನ್ನಗಳು ಲಭ್ಯವಾಗಲಿವೆ.
ಮನೋರಂಜನಾ ವಿಭಾಗದಲ್ಲಿ ಬ್ರೇಕ್‌ಡ್ಯಾನ್ಸ್, ಟೈಟಾನಿಕ್, ಮೆರ್ರಿ ಕೊಲಂಬಸ್, ಜಾಯಿಂಟ್ ವೀಲ್, ಹಾರ್ಸ್ ಎಂಜಿಆರ್, ಮಿನಿ ಟ್ರೇನ್‌ನಲ್ಲಿ ಆಡುವ ಅವಕಾಶವಿದೆ. ಮಂಗಳಾ ಕ್ರೀಡಾಂಗಣದ ಕರಾವಳಿ ಉತ್ಸವ ಮೈದಾನದಲ್ಲಿ ಪ್ರತಿದಿನ ಸಂಜೆ 4ರಿಂದ 9ರ ವರೆಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.