ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ ಮಿತ್ರ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್(National Conference) 51 ಸ್ಥಾನಗಳಲ್ಲಿಸ್ಪರ್ಧಿಸಲಿದ್ದು, 32 ಕ್ಷೇತ್ರಗಳಲ್ಲಿ ಕಾಂಗ್ರೆಸ್(Congress) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಸೋಮವಾರ(ಆ 26)ಸಂಜೆ ಎಂದು ಉಭಯ ಪಕ್ಷಗಳ ಹಿರಿಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು ‘ಮೈತ್ರಿಕೂಟವು ಕೇಂದ್ರಾಡಳಿತ ಪ್ರದೇಶದ 5 ಸ್ಥಾನಗಳಲ್ಲಿ ಸೌಹಾರ್ದಯುತ ಶಿಸ್ತಿನ ಸ್ಪರ್ಧೆಯನ್ನು ನಡೆಸಲಿದೆ’ ಎಂದು ಹೇಳಿದ್ದಾರೆ.
ಐದು ಸ್ಥಾನಗಳಲ್ಲಿ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಕಣ್ಣಕಿಳಿಸುತ್ತಿರುವುದು ಎರಡು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತದೆ. ಇಂಡಿಯಾ ಮೈತ್ರಿಕೂಟದಡಿಯಲ್ಲಿ ಸ್ಪರ್ಧೆ ನಡೆಯುತ್ತಿದ್ದು, ಕಾಂಗ್ರೆಸ್ ಬೆಳಗ್ಗೆ ಶ್ರೀನಗರಕ್ಕೆ ಇಬ್ಬರು ಹಿರಿಯ ನಾಯಕರನ್ನು ಕಳುಹಿಸಿಕೊಟ್ಟ ನಂತರವೂ ಸಂಪೂರ್ಣವಾಗಿ ಐದು ಸ್ಥಾನಗಳ ವಿಚಾರ ಬಗೆ ಹರಿಸಲು ಸಾಧ್ಯವಾಗಲಿಲ್ಲ.
ಸೀಟು ಹಂಚಿಕೆ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಪ್ರಕಟಿಸಿದ್ದಾರೆ. ಮೈತ್ರಿಕೂಟವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಪ್ಯಾಂಥರ್ಸ್ ಪಾರ್ಟಿಗೆ ತಲಾ 1 ಸ್ಥಾನವನ್ನು ಬಿಟ್ಟು ಕೊಡಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ದಶಕದ ನಂತರ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.