ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ವಿಭಾಗಕ್ಕೆ ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ ಎಂಬ ಪ್ರಶಸ್ತಿ ಗರಿ ಲಭಿಸಿದೆ. 2017-2020ರ ಅವಧಿಗೆ “ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ’ ಎಂದು ಪ್ರಶಸ್ತಿಗೆ ಆಯ್ಕೆಯಾಗಿದ್ದು, 50ನೇ ಅಖೀಲ ಭಾರತ ಸಂಶೋಧನಾ ಕಾರ್ಯಾಗಾರದಲ್ಲಿ ಪ್ರಕಟಿಸಲಾಗಿದೆ.
ದೇಶದ ಒಟ್ಟಾರೆ ಜೋಳದ ಅಭಿವೃದ್ಧಿಯಲ್ಲಿನ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. 1969ರಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದ್ದು, ಸುವರ್ಣ ಸಂಭ್ರಮದ ವರ್ಷಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಬಂದಿದ್ದು ವಿಶೇಷವಾಗಿದೆ ಎಂದು ಕುಲಪತಿ ಡಾ|ಮಹಾದೇವ ಚೆಟ್ಟಿ ತಿಳಿಸಿದ್ದಾರೆ.
ಈ ಕೇಂದ್ರವು ಮುಂಗಾರು ಜೋಳದಲ್ಲಿ ಇಲ್ಲಿಯವರೆಗೆ 4 ಹೈ ಬ್ರೀಡ್ ಮತ್ತು 7 ಸುಧಾರಿತ ತಳಿಗಳನ್ನೂ, ಹಿಂಗಾರು ಜೋಳದಲ್ಲಿ 2 ಹೈಬ್ರಿಡ್ ಮತ್ತು 3 ಸುಧಾರಿತ ತಳಿಗಳನ್ನೂ ಅಭಿವೃದ್ಧಿಪಡಿಸಿ ರೈತರಿಗೆ ಬಿಡುಗಡೆ ಮಾಡಿದೆ. ಜೊತೆಗೆ ಅನೇಕ ಬೆಳೆ ಉತ್ಪಾದನೆ ಹಾಗೂ ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳನ್ನು ಶಿಫಾರಸು ಮಾಡಲಾಗಿದೆ. ಇದಲ್ಲದೇ ಕೇಂದ್ರವು ಅಭಿವೃದ್ಧಿಪಡಿಸಿದ
ಬೇಗನೆ ಮಾಗುವ ಮುಂಗಾರು ಜೋಳದ ಹೈಬ್ರೀಡ್ ತಳಿ ಎಸ್‌ಪಿಎಚ್-1883ನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ. ಈ ತಳಿಯನ್ನು ಡಾ| ಎನ್.ಈ. ಹನುಮರಟ್ಟಿ ಹಾಗೂ ಡಾ|ಎಸ್.ಟಿ.ಕಜ್ಜಿಡೋಣಿ ಅವರು ಡಾ|ವಿ.ಎಸ್. ಕುಬಸದ, ಡಾ|ಟಿ.ಟಿ. ಬಂಡಿವಡ್ಡರ, ಡಾ|ಎಸ್.ಎನ್. ಚಟ್ಟಣ್ಣವರ, ಡಾ|ಎಚ್.ಎಂ. ಶೈಲಾ ಅವರ ಸಹಾಯದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ಈ ಹೈಬ್ರಿàಡ್ ತಳಿಯ ಬೀಜಗಳನ್ನು ಅಭಿವೃದ್ಧಿಪಡಿಸಿ 2021ನೇ ಮುಂಗಾರಿಗೆ ಪ್ರಾಯೋಗಿಕವಾಗಿ ಬೆಳೆಯಲು ರೈತರಿಗೆ ಒದಗಿಸಲು ಯೋಚಿಸಲಾಗಿದೆ. ಇದೇ ಕೇಂದ್ರದಿಂದ ಬಿಡುಗಡೆ ಮಾಡಿರುವ ಎಸ್‌ಪಿವಿ-2217 ತಳಿಯು ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಹೆಚ್ಚಿನ ಕಾಳು ಮತ್ತು ಮೇವಿನ ಇಳುವರಿ ನೀಡುತ್ತದೆ ಎಂದು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ರಮೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.