Advertisement

ಗದಗ ಜಿಮ್ಸ್‌-ರೋಣ ಆಸ್ಪತ್ರೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

06:39 PM May 23, 2023 | Team Udayavani |

ಗದಗ: ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವಲ್ಲಿ ಹೆಸರುವಾಸಿಯಾದ ಗದಗ ಜಿಮ್ಸ್‌ ಆಸ್ಪತ್ರೆ ಹಾಗೂ ರೋಣ ಪಟ್ಟಣದ ಡಾ| ಪಂಡಿತ್‌ ಭೀಮಸೇನ್‌ ಜೋಶಿ ತಾಲೂಕು ಆಸ್ಪತ್ರೆಯು ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿವೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತ ಸರ್ಕಾರದ ಅಧೀನದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಮಕ್ಕಳ ಅಧಿಕಾರಿಗಳು ಗದಗ ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದನ್ವಯ ಹೆರಿಗೆ ಕೊಠಡಿಯ ಗುಣಮಟ್ಟದಲ್ಲಿ ಶೇ. 93ರಷ್ಟು ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶೇ. 90ರಷ್ಟು ಗುರಿ ತಲುಪಿದ್ದರಿಂದ ಹೆರಿಗೆ ಕೊಠಡಿ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ತಲಾ 6 ಲಕ್ಷ ರೂ. ದಂತೆ ಒಟ್ಟು 12 ಲಕ್ಷ ರೂ. ಬಹುಮಾನ ಪಡೆದುಕೊಂಡಿದೆ. ಈ ಪ್ರಶಸ್ತಿಗೆ ಆಸ್ಪತ್ರೆಯ
ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮ ಹಾಗೂ ರೋಗಿಗಳ ಕುರಿತು ಅವರ ಕಾಳಜಿ ಹಾಗೂ ಆಸ್ಪತ್ರೆಯ ಸೌಲಭ್ಯಕ್ಕೆ ಸಂದ ಗೌರವವಾಗಿದೆ.

ಈ ಹಿಂದೆ ಕೋವೀಡ್‌-19 ಸಂದರ್ಭದಲ್ಲಿ ಹೆರಿಗೆಗೆ ಸಂಬಂಧಿಸಿದ ರೋಗಿಗಳಿಗೆ ಸ್ಥಳೀಯ ದಂಡಪ್ಪ ಮಾನ್ವಿ ಆಸ್ಪತ್ರೆ ಗದಗದಲ್ಲಿ ಸೇವೆ ನೀಡಲಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಪುನಃ ಜಿಮ್ಸ್‌ ಆಸ್ಪತ್ರೆ ಗದಗ ಇಲ್ಲಿಗೆ ಸ್ಥಳಾಂತರಿಸಲಾಯಿತು.

24×7 ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯು ಲಭ್ಯವಿದ್ದು, ದೇಶ ಮಟ್ಟದಲ್ಲಿ ಗುಣಮಟ್ಟದ ಸೇವೆಗಳಿಂದ ಗುರುತಿಸಿಕೊಳ್ಳುವಂತಾಗಿದೆ. ಗದಗ ಜಿಲ್ಲೆಯ 6 ತಾಲೂಕುಗಳಿಂದ ಹಾಗೂ ಪಕ್ಕದ ಜಿಲ್ಲೆಗಳಿಂದಲೂ ಗರ್ಭಿಣಿಯರು ಮತ್ತು
ಮಕ್ಕಳು ದಾಖಲಾಗುತ್ತಿದ್ದಾರೆ. ತಿಂಗಳಿಗೆ ಅಂದಾಜು 400ರಿಂದ 500 ಹೆರಿಗೆ ಆಗುತ್ತಿದ್ದು, ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿರುವುದು ಗಮನಾರ್ಹ ವಿಷಯವಾಗಿದೆ. ದಿನನಿತ್ಯ ಸುಮಾರು 1,200ಕ್ಕಿಂತ ಹೆಚ್ಚು ರೋಗಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಎಲ್ಲ ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌರವದೊಂದಿಗೆ ವೈದ್ಯೋಪಚಾರ ನೀಡುತ್ತಿರುವುದು ಕೂಡ ಪ್ರಶಸ್ತಿ ದೊರೆಯಲು ಕಾರಣವಾಗಿದೆ.

ಡಾ| ಪಂಡಿತ್‌ ಭೀಮಸೇನ್‌ ಜೋಶಿ ತಾಲೂಕು ಆಸ್ಪತ್ರೆ

Advertisement

ಗದಗ ಜಿಲ್ಲೆಯ ರೋಣ ಪಟ್ಟಣದ 100 ಹಾಸಿಗೆಯ ಡಾ| ಪಂಡಿತ್‌ ಭೀಮಸೇನ್‌ ಜೋಶಿ ತಾಲೂಕು ಆಸ್ಪತ್ರೆಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತ ಸರ್ಕಾರದ ಅಧೀನದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಮಕ್ಕಳ ಅಧಿ ಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರನ್ವಯ ಹೆರಿಗೆ ಕೊಠಡಿಯ ಗುಣಮಟ್ಟದಲ್ಲಿ ಶೇ. 93ರಷ್ಟು ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶೇ. 90ರಷ್ಟು ಗುರಿ ತಲುಪಿದ್ದರಿಂದ ಹೆರಿಗೆ ಕೊಠಡಿ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ತಲಾ 2 ಲಕ್ಷ ರೂ.ದಂತೆ ಒಟ್ಟು 4 ಲಕ್ಷ ಬಹುಮಾನ ಪಡೆದುಕೊಂಡಿದೆ.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೆರಿಗೆ ವಿಭಾಗದಲ್ಲಿ ರೋಗಿಗಳಿಗೆ ಕೊಡಲಾಗುತ್ತಿರುವ ಸೇವೆಗೆ ರಾಷ್ಟ್ರೀಯ ಲಕ್ಷ್ಯ ಕಾರ್ಯಕ್ರಮದಡಿ ಉತ್ತಮ ಗುಣಮಟ್ಟಕ್ಕೆ ಪ್ರಮಾಣಿಕರಣಗೊಂಡಿದೆ. ನಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೌಲಭ್ಯಗಳು ಹಾಗೂ ಸೇವೆಗಳು ದೊರೆಯುತ್ತಿವೆ. ಜಿಲ್ಲಾಸ್ಪತ್ರೆಯ ವೈದ್ಯಕೀಯ ಅ ಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಯೋಗದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿ ಪಾತ್ರ ಬಹು ಮುಖ್ಯವಾಗಿದೆ. ನಮ್ಮಲ್ಲಿ ಅನೇಕ ಸೌಲಭ್ಯಗಳು ಈಗಾಗಲೇ ದೊರೆಯುತ್ತಿದ್ದು, ಇನ್ನೂ ಹೆಚ್ಚಿನ ಸೌಲಭ್ಯಗಳು ಹಾಗೂ ಸೇವೆಗಳು ರೋಗಿಗಳಿಗೆ ದೊರಕಿಸಿಕೊಡಲು ನಿರಂತರ ಪ್ರಯತ್ನಿಸುತ್ತೇವೆ.
*ಡಾ| ಬಸವರಾಜ ಬೊಮ್ಮನಹಳ್ಳಿ, ನಿರ್ದೇಶಕರು ಜಿಮ್ಸ್‌, ಗದಗ

ಗದಗ ಜಿಲ್ಲೆಯ ಜಿಮ್ಸ್‌ ಆಸ್ಪತ್ರೆ ಮತ್ತು ರೋಣ ಪಟ್ಟಣದ ಡಾ| ಪಂಡಿತ್‌ ಭೀಮಸೇನ್‌ ಜೋಶಿ ತಾಲೂಕು ಆಸ್ಪತ್ರೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ.
ವೈಶಾಲಿ ಎಂ.ಎಲ್‌., ಜಿಲ್ಲಾಧಿಕಾರಿ

ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಯೋಗದೊಂದಿಗೆ ಲಕ್ಷ್ಯ ಕಾರ್ಯಕ್ರಮದಡಿ ಜಿಮ್ಸ್‌ ಹಾಗೂ ರೋಣ ಪಟ್ಟಣದ ತಾಲೂಕು ಆಸ್ಪತ್ರೆಯ ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತಚಿಕಿತ್ಸಾ ವಿಭಾಗದ ಲ್ಲಿ ಪ್ರಶಸ್ತಿ ಪಡೆದಿದ್ದು, ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಮೂಲ ಕಾರಣ. ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ 3 ತಾಲೂಕು ಮಟ್ಟದ ಆಸ್ಪತ್ರೆಗಳನ್ನೂ ಲಕ್ಷ್ಯ ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು.
*ಡಾ| ಸುಶೀಲಾ ಬಿ., ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next