ಮುಂಬೈ: 2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಪ್ರಕರಣದಲ್ಲಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ವಿನಾಯ್ತಿ ನೀಡಲು ಬಾಂಬೆ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ವಿವೇಕಾನಂದ ಗುಪ್ತ ಎಂಬ ಸಾಮಾಜಿಕ ಕಾರ್ಯಕರ್ತ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಮತಾ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ಸಮನ್ಸ್ ನೀಡಿತ್ತು. ಇದನ್ನು ರದ್ದುಪಡಿಸುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಮಮತಾ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮನ್ಸ್ ಅನ್ನು ರದ್ದುಪಡಿಸಿದ್ದ ಸೆಷನ್ಸ್ ನ್ಯಾಯಾಲಯ, ಪ್ರಕ್ರಿಯೆಯಲ್ಲಿ ಕೆಲವೊಂದು ಲೋಪಗಳಾಗಿವೆ.
ಹೊಸತಾಗಿ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಈ ವರ್ಷ ಜನವರಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿತ್ತು. ಇದನ್ನು ವಿರೋಧಿಸಿ ಮಮತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಲ್ಲೂ ಅವರಿಗೆ ಸೋಲಾಗಿದೆ.
ಪ್ರಕರಣವೇನು?: 2022ರ ಮಾರ್ಚ್‌ನಲ್ಲಿ ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ಕುಳಿತುಕೊಂಡೇ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದ್ದರು. ಬಳಿಕ ನಿಂತುಕೊಂಡು ಎರಡು ಸಾಲು ಹಾಡಿದರು. ನಂತರ ರಾಷ್ಟ್ರಗೀತೆ ಪೂರ್ಣವಾಗುವ ಮೊದಲೇ ಅಲ್ಲಿಂದ ಹೊರಟು ಹೋದರು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಗುಪ್ತ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಮತಾ ಬ್ಯಾನರ್ಜಿಗೆ ಸಮನ್ಸ್ ಜಾರಿಗೊಳಿಸಿತ್ತು.
ಕೇಂದ್ರದ ವಿರುದ್ಧ ಪ್ರತಿಭಟನೆ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಕೋಲ್ಕತದಲ್ಲಿ ಎರಡು ದಿನಗಳ ಧರಣಿ ಆರಂಭಿಸಿದೆ.