ತೇರದಾಳ: ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭುದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಸಮಬಲ ಪ್ರದರ್ಶನ ನಡೆಯಿತು. ಎಂಇಜಿ ಸೆಂಟರ್ ಬೆಂಗಳೂರಿನ ಫೈಲವಾನ್ ಅಮೀತ್ ದಿಲ್ಲಿ ಹಾಗೂ ತಾಲೀಮ ಕ್ರೀಡಾ ಹಾಸ್ಟೆಲ್ ದಾವಣಗೆರೆಯ ಪೈಲವಾನ್ ಕಾರ್ತಿಕ ಕಾಟೆ ನಡುವೆ ನಡೆದ ಕೊನೆಯ ಪಂದ್ಯ ಸಮಬಲಗೊಂಡಿತು. ಇಬ್ಬರು ಕುಸ್ತಿಪಟುಗಳು 75ನಿಮಿಷವರೆಗೆ ತಮ್ಮ ಕೈ ಚಳಕ, ಯುಕ್ತಿ, ಶಕ್ತಿ ತೋರಿದರು. ಜಗಜಟ್ಟಿಗಳ ಕುಸ್ತಿ ಕಾಳಗ ಸಮಬಲಗೊಂಡಿದೆ ಎಂದು ತೀಪುಗಾರರು ನಿರ್ಣಯಿಸಿದರು.
ಕೊಲ್ಹಾಪುರದ ಗಣೇಶ ಕುಂಕುಳೆ ಹಾಗೂ ಶಿವಪುತ್ರ ಮಾಯಾನಟ್ಟಿ, ಬೆಳಗಾವಿಯ ಭೀಮಾ ಮುಗಳಖೋಡ, ಕುರ್ಡವಾಡದ ಮೋಯಿನ್ ಪಟೇಲ ಹಾಗೂ ಸುನೀಲ ನೌಲಿ, ಸಾಂಗಲಿಯ ಗಜಾನನ ಇಂಗಳಗಿ, ಹನಗಂಡಿಯ ಉದಯ ಹನಗಂಡಿ ಹಾಗೂ ಸಮೀರ, ಚಿಂಚಲಿಯ ಬಸು ಮಸರಗುಪ್ಪಿ, ಶ್ರೀಶೈಲ ಚಿಂಚಲಿ ಹಾಗೂ ಹೊನ್ನಪ್ಪ ಸಿಂದಗಿ, ಸಾಂವಗಾಂವದ ದಯಾನಂದ ಶಿರಗಾಂವ ಎದುರಾಳಿಯನ್ನು ಸೋಲಿಸಿ, ಕುಸ್ತಿ ಗೆದ್ದು, ದಾಖಲೆ ಮಾಡಿ, ನಗದು ಹಣ, ಢಾಲು, ಶಾಲು ಸನ್ಮಾನ ಪಡೆದರು. ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಹರಿಯಾಣ ಮುಂತಾದೆಡೆಗಳಿಂದ 65ಕ್ಕೂ ಹೆಚ್ಚು ಘಟಾನುಘಟಿ ಜೋಡಿ ಪೈಲವಾನರು ಸಾಹಸ-ಶಕ್ತಿ ಮತ್ತು ಯುಕ್ತಿ ತೋರಿಸಿ ಮೆರಗು ತಂದರು. ಚಿಕ್ಕಮಕ್ಕಳ ಕುಸ್ತಿ ಪ್ರದರ್ಶನ ನಡೆಯಿತು.
ಕುಸ್ತಿಪ್ರೇಮಿಗಳ ಜನಸಮೂಹದ ಚಪ್ಪಾಳೆಯ ಪ್ರೋತ್ಸಾಹ, ಸಂಭ್ರಮದ ನಡುವೆ ಅಖಾಡಕ್ಕೆ ಇಳಿದ ಜಗಜಟ್ಟಿಗಳು ಮದ್ದಾನೆಯಂತೆ ಗೋಚರಿಸಿ, ಕೆಲ ಹೊಸ ದಾಖಲೆ ಮಾಡಿದರು. 7ವರ್ಷದ ಪೈಲವಾನ ಪ್ರೀತಮ್ ಚನಾಳ, ಪುಟ್ಟ ಬಾಲಕಿ ಪ್ರಭಾವತಿ ಮುಧೋಳ ಗಮನ ಸೆಳೆದರು. ಈ ಬಾರಿ ಬೆಳಗಾವಿಯ ಪೈ. ಬಸು ಚಿಮ್ಮಡ ಹಾಗೂ ಕುರ್ಡವಾಡಿಯ ಪೈ. ಸಾಗರ ಮೋಟೆ, ಕೊಲ್ಲಾಪುರದ ಪೈ.ನಿಲೇಶ ತರಂಗೆ ಹಾಗೂ ಸಾಂವಗಾಂವದ ಪೈ. ಶಿವಯ್ಯ ಕಂಕಣವಾಡಿ ಸೇರಿದಂತೆ ಕೆಲವರ ಕುಸ್ತಿಗಳು ಸಮಬಲದಿಂದ ನಡೆದವು. ದಾವಣಗೆರೆಯ ಕಿರಣ ಭದ್ರಾವತಿ ಅವರು ಹಾರೂಗೇರಿಯ ಸತ್ಪಾಲ ಅವರನ್ನು ಸೋಲಿಸಿ ಪಾರಿತೋಷಕ ಪಡೆದರು. ಬೆಳಗಾವಿಯ ಮೂಗ(ಮಾತು ಬಾರದ) ತುಕಾರಾಮ ಅಥಣಿ ಅವರು ಕೋಲ್ಲಾಪುರದ ಶಿವಾನಂದ ನಿರ್ವಾನಟ್ಟಿ ಅವರನ್ನು ಸೋಲಿಸಿದರು. ವಿಜಯ ಮಹಾಂತೇಶ ನಾಡಗೌಡ, ಕ್ಷೇತ್ರದ ಶಾಸಕ ಸಿದ್ದು ಸವದಿ, ಬಾಹು ಸರಕಾರ ದೇಸಾಯಿ, ಡಾ| ಚಿದಾನಂದ ಸರಿಕರ, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಕಲ್ಲಪ್ಪ ಶಿರೋಳ, ಬಿ.ಕೆ. ಕೊಣ್ಣೂರ, ಬಾಬಾಗೌಡ ಪಾಟೀಲ, ನಾಗಪ್ಪ ಸನದಿ ಉಪಸ್ಥಿತರಿದ್ದರು.