ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಎರಡು ದಿನಗಳ ಹಿಂದಷ್ಟೇ ಹಿಂದೂ ಮಹಾಸಭಾ ತನ್ನ ಕಚೇರಿಯಲ್ಲಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರಿನಲ್ಲಿ ಅಧ್ಯಯನ ಕೇಂದ್ರ(ಜ್ಞಾನಶಾಲಾ) ಆರಂಭಿಸಿದ್ದು, ಇದೀಗ ಜಿಲ್ಲಾಡಳಿತ ಮಧ್ಯಪ್ರವೇಶಿಸುವ ಮೂಲಕ ಅಧ್ಯಯನ ಕೇಂದ್ರವನ್ನು ಮುಚ್ಚಿಸಿರುವುದಾಗಿ ವರದಿಯಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದೌಲತ್ ಗಂಜ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.ನಾಥೂರಾಮ್ ಗೋಡ್ಸೆ ಹೆಸರಿನಲ್ಲಿ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ ಎಂಬ ವಿಷಯ ತಿಳಿಸದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಿಶೋರ್ ಕನ್ಯಾಲ್ ಪಿಟಿಐಗೆ ತಿಳಿಸಿದ್ದಾರೆ.
ನಾಥೂರಾಮ್ ಗೋಡ್ಸೆ ಹೆಸರಿನ ಜ್ಞಾನಶಾಲೆಯಲ್ಲಿ ವಿಭಜಿತ ಭಾರತದ ಹಲವು ಆಯಾಮಗಳ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಹಿಂದೂ ಮಹಾಸಭಾ ತಿಳಿಸಿತ್ತು.
ಇದನ್ನೂ ಓದಿ:ಕೆಜಿಎಫ್ -2 ಟೀಸರ್ ನಲ್ಲಿ ಪ್ರಚೋದನಾತ್ಮಕ ದೃಶ್ಯ: ಯಶ್ ಗೆ ನೋಟಿಸ್ ನೀಡಿದ ಆರೋಗ್ಯ ಇಲಾಖೆ
ಅಲ್ಲದೇ ರಾಷ್ಟ್ರೀಯ ನಾಯಕರಾದ ಗುರು ಗೋವಿಂದ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್ ಅವರಂತಹ ಮಹಾನ್ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು. 1947ರಲ್ಲಿ ಭಾರತ ವಿಭಜನೆಯಾಗುವ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ಕೈವಾಡ ಇದ್ದಿರುವುದಾಗಿ ಭಾರದ್ವಾಜ್ ಈ ಸಂದರ್ಭದಲ್ಲಿ ಆರೋಪಿಸಿದ್ದರು.