Advertisement

ನಾಸಿಕ್‌ ಬಂಟರ ಸಂಘದ 11ನೇ ವಾರ್ಷಿಕೋತ್ಸವ ಸಂಭ್ರಮ

04:33 PM Mar 09, 2017 | Team Udayavani |

ನಾಸಿಕ್‌: ಬಹಳ ಸುಂದರ ಮನಮೋಹಕ ಪ್ರಕೃತಿ ಸೌಂದರ್ಯದ ಊರಾದ ನಾಸಿಕ್‌ನಲ್ಲಿ ನೆಲೆಸಿರುವ ಬಂಟ ಸಮಾಜ ಬಾಂಧವರ ಸಾಂಘಿಕ ಒಗ್ಗಟ್ಟು ಹಾಗೂ ಕಾರ್ಯ ವೈಖರಿ ಅಭಿನಂದನೀಯವಾಗಿದೆ. ನಾವು  ಸಮಾಜ ಬಾಂಧವರ ಏಳಿಗೆಗಾಗಿ ಬದ್ಧತೆಯನ್ನು ರೂಢಿಸಿಕೊಂಡು ಸಮಾಜಸೇವೆಯ ಕಾಯಕವನ್ನು ಮಾಡುತ್ತಿರಬೇಕು. ಸಮಾಜ ಸೇವೆಯೇ ಸಂಘ ಸಂಸ್ಥೆಗಳ ಮುಖ್ಯ ಧ್ಯೇಯವಾಗಿರಬೇಕು ಎಂದು ಪುಣೆಯ ಖ್ಯಾತ ಸಮಾಜ ಸೇವಕಿ ಪುಷ್ಪಾ$ ಕುಶಲ್‌  ಹೆಗ್ಡೆ ಅವರು ನುಡಿದರು.

Advertisement

ಮಾ. 4ರಂದು ರಾವ್‌ ಸಾಹೇಬ್‌ ಥೋರಾತ್‌ ಹಾಲ್‌ನಲ್ಲಿ ನಡೆದ  ನಾಸಿಕ್‌  ಬಂಟರ ಸಂಘದ 11 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಮಾಜಸೇವೆ ಎಂಬುದು ಕೇವಲ ಹಣದಿಂದಲೇ ಆಗಬೇಕೆಂದಿಲ್ಲ. ಪರೋಪಕಾರಿ ಭಾವದೊಂದಿಗೆ ನಮ್ಮಿಂದಾದ ಯಾವುದೇ ರೀತಿಯಿಂದಲೂ ಸೇವೆ ಮಾಡಬಹುದಾಗಿದೆ. ಸಮಾಜದ ಬಡ ಹೆಣ್ಮಕ್ಕಳ  ವಿದ್ಯಾಭ್ಯಾಸಕ್ಕಾಗಿ ನೆರವು ನೀಡುವುದರಿಂದ ಮುಂದೆ ಅವಳ ಕುಟುಂಬವೇ ಉದ್ಧಾರವಾಗಬಹುದು. ಅಂತೆಯೇ ಜೀವನದಲ್ಲಿ ಸಾಧ್ಯವಾದಷ್ಟು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡರೆ ಆತ್ಮ ಸಂತೃಪ್ತಿ ನಮ್ಮದಾಗುತ್ತದೆ. ಜೀವನದಲ್ಲಿ ಯಾವುದೇ ಕಾರ್ಯವನ್ನು ನಾಳೆ ಮಾಡುವೆ ಎಂದು ಉದಾಸೀನ ಪ್ರವೃತ್ತಿ ಬೆಳೆಸಿಕೊಳ್ಳದೆ ಆ ಕಾರ್ಯವನ್ನು ಇಂದೇ ಆರಂಭಿಸಿದರೆ ಸಾರ್ಥಕತೆಯನ್ನು ಪಡೆಯಬಹುದಾಗಿದೆ ಎಂದರು.

ಅತಿಥಿಯಾಗಿ ಉಪಸ್ಥಿತರಿದ್ದ ಪುಣೆ ಸಿಂಬಾಯಾಸೀಸ್‌ ಲಾ ಕಾಲೇಜಿನ ನಿರ್ದೇಶಕಿ ಡಾ| ಶಶಿಕಲಾ ಗುರುಪುರ ಅವರು ಮಾತನಾಡಿ, ನಮ್ಮೊಳಗಿನ ಸ್ನೇಹ ಬಾಂಧವ್ಯವೇ ಇಂದು ಇಷ್ಟೊಂದು ಸಂಖ್ಯೆಯಲ್ಲಿ ನಮ್ಮನ್ನು ಒಗ್ಗೂಡಿಸಿದೆ. ನಮ್ಮ ಸಮಾಜದಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ಶಿಕ್ಷಿತರಾಗಿ ಕುಟುಂಬದ ಲಾಲನೆ ಪೋಷಣೆಯಲ್ಲೇ ತೊಡಗಿಕೊಂಡಿದ್ದಾರೆಯೇ  ವಿನಾ  ವೃತ್ತಿ ಜೀವನ ಅಥವಾ ಯಾವುದೇ ಸಾಧನೆ  ಮಾಡಲು ಬಯಸುವುದಿಲ್ಲ. ಮಾತೃ ಪ್ರಧಾನ ದೇಶವಾದ ನಮ್ಮಲ್ಲಿ ಮಹಿಳೆಗೆ ಜೀವನದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡು ಗೌರವಯುತವಾಗಿ ಬಾಳಬೇಕಾಗಿದೆ. ಮಹಿಳೆಯರು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು  ಮತ್ತು ನಿಯಮಿತ ವ್ಯಾಯಾಮವನ್ನು ಮಾಡುತ್ತಾ ಆರೋಗ್ಯದ ಬಗ್ಗೆ ಗಮನಹರಿಸುತ್ತಿದ್ದರೆ ಜೀವನ ಲವಲವಿಕೆಯೊಂದಿಗೆ ಸಾಗುತ್ತದೆ.  ಹೆಣ್ಣೊಬ್ಬಳ ಮದುವೆಗೆ ಸಾವಿರಾರು ಜನರು ಬಂದು ಶುಭ ಹಾರೈಸುತ್ತಾರೆ ಆದರೆ ಸಣ್ಣ ತಪ್ಪಿನಿಂದ ನಾಳೆ  ವಿಚ್ಛೇದನದಂತಹ  ಪರಿಸ್ಥಿತಿ ಎದುರಾದರೆ ಹೆತ್ತವರು ಮಾತ್ರವೇ  ಅವಳ ನೆರವಿಗೆ ಬರುತ್ತಾರೆ ಹೊರತು ಅನ್ಯರಾರೂ ಹತ್ತಿರ ಸುಳಿಯುವುದಿಲ್ಲ. ಇದರ ಬಗ್ಗೆ ನಾವು ಜಾಗೃತಿ ಮೂಡಿಸಬೇಕಾಗಿದೆ. ಹೆತ್ತವರು ಮಕ್ಕಳಿಗಾಗಿ ಸಮಯವನ್ನು ಮೀಸಲಿಟ್ಟು   ಮಕ್ಕಳನ್ನು ಮುಕ್ತ ಮನಸ್ಸಿನಿಂದ ಬೆಳೆಸಿದರೆ ಹೊಸತನದ ಚೈತನ್ಯ ಅವರಲ್ಲಿ ತುಂಬುತ್ತದೆ. ನಾಸಿಕ್‌  ಬಂಟರ ಸಂಘ ಸಮಾಜದ  ಜನರಿಗೆ ಸಾಮಾಜಿಕ ಆರೋಗ್ಯ, ಶಿಕ್ಷಣದ ಸೇವೆಯನ್ನು ನೀಡುತ್ತಾ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುತ್ತ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳೆಸುತ್ತಾ ಅನ್ಯರಿಗೆ ಆದರ್ಶವಾಗಿ ಗುರುತಿಸಿಕೊಳ್ಳಲಿ ಎಂದು ಹೇಳಿ ಶುಭಹಾರೈಸಿದರು.

ಅತಿಥಿ-ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್‌ ಶೆಟ್ಟಿ, ಸ್ಥಾಪಕಾಧ್ಯಕ್ಷ ಲಿಂಗಪ್ಪ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ, ಉಪಾಧ್ಯಕ್ಷರುಗಳಾದ ಶಶಿಕಾಂತ ಶೆಟ್ಟಿ, ಭಾಸ್ಕರ ಶೆಟ್ಟಿ, ಸಲಹಾ ಸಮಿತಿಯ ಸುಭಾಷ್‌ ಹೆಗ್ಡೆ, ರಂಗನಾಥ ರೈ, ಜನಸಂಪರ್ಕಾಧಿಕಾರಿ ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಾರ್ಷಿಕ ವರದಿಯನ್ನು ಓದಿದರು. ಕೋಶಾಧಿಕಾರಿ ಪ್ರದೀಪ್‌ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಅತಿಥಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಲಲಿತಾ ಕೆ.  ಶೆಟ್ಟಿ, ಮಮತಾ ಬಿ. ಶೆಟ್ಟಿ, ಪ್ರಭಾ ಆರ್‌. ಶೆಟ್ಟಿ ಪ್ರಾರ್ಥನೆಗೈದರು. ಪ್ರೇಮಾ ರೈ ಮತ್ತು ಪ್ರದೀಪ್‌ ರೈ ಅತಿಥಿಗಳನ್ನು ಪರಿಚಯಿಸಿದರು. ವಿಲಾಸಿನಿ ಸಿ. ಶೆಟ್ಟಿ ಮತ್ತು ಶರಣ್ಯಾ ಎಂ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಕರುಣಾಕರ ಶೆಟ್ಟಿ ಸ್ವಾಗತಿಸಿ ಚಂದ್ರಶೇಖರ ಶೆಟ್ಟಿ ವಂದಿಸಿದರು.

Advertisement

ಹರೀಶ್‌ ಆಳ್ವ, ಗಣೇಶ್‌ ಶೆಟ್ಟಿ, ಮನೋಜ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ಪ್ರಮೀಳಾ ಶೆಟ್ಟಿ, ಉದಯ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಮಕ್ಕಳಿಂದ ಮತ್ತು ಮಹಿಳೆಯರಿಂದ ವಿವಿಧ ನೃತ್ಯ ವೈವಿಧ್ಯ ಹಾಗೂ ಮುಂಬಯಿಯ ಕೃಷ್ಣರಾಜ್‌ ಶೆಟ್ಟಿ ನಿರ್ದೇಶನದ ಪ್ರಸಿದ್ಧ ಕಲಾವಿದರುಗಳ ಕೂಡುವಿಕೆಯೊಂದಿಗೆ ಈ ರಾತ್ರೆಗ್‌  ಪಗೆಲ್‌Y ಯಾನ್‌ ಎನ್ನುವ ತುಳು ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನ ನಡೆಯಿತು. ಉದಯ… ಶೆಟ್ಟಿ ಪ್ರಾಯೋಜಕತ್ವದಲ್ಲಿ  ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

ನಮ್ಮ ಸಂಘವು ನಾಸಿಕ್‌ನಲ್ಲಿರುವ ಸಮಾಜ ಬಾಂಧವರನ್ನು ಒಗ್ಗಟ್ಟಿನಿಂದ ಪರಸ್ಪರ ಕಷ್ಟಸುಖಗಳನ್ನು ಹಂಚಿಕೊಳ್ಳಲು ವೇದಿಕೆ ಎಂಬಂತೆ ಈ ಸಂಘವನ್ನು ಆರಂಭಿಸಿ ಇದೀಗ ನಿರೀಕ್ಷೆಗೂ ಮೀರಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ಸಂಸ್ಥೆಯು ಪ್ರಗತಿಪಥದತ್ತ ಸಾಗುತ್ತಿದ್ದು, ಮುಂದೆಯೂ ಸಮಾಜಪರ ಕಾರ್ಯಗಳಿಗೆ ಸಹಕಾರ ನೀಡಬೇಕು. ಸಮಾಜ ಸೇವೆಯೇ ನಮ್ಮ ಮೂಲ ಉದ್ದೇಶವಾಗಿದ್ದು, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಸಂಸ್ಥೆಯನ್ನು ಬಲಪಡಿಸೋಣ. ಸಂಸ್ಥೆಯ ಸಮಾಜಪರ ಕಾರ್ಯಗಳಲ್ಲಿ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು 
– ಕರುಣಾಕರ ಶೆಟ್ಟಿ (ಅಧ್ಯಕ್ಷರು : ನಾಸಿಕ್‌ ಬಂಟರ ಸಂಘ).

Advertisement

Udayavani is now on Telegram. Click here to join our channel and stay updated with the latest news.

Next