ಮುಂಬಯಿ: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಸಿಕ್ ನಗರದಲ್ಲಿ ಮೇ 12ರಿಂದ ಹತ್ತು ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿಗೊಳಿಸುವುದಾಗಿ ಮಹಾರಾಷ್ಟ್ರದ ಅಧಿಕಾರಿಗಳು ಸೋಮವಾರ(ಮೇ 10) ತಿಳಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಮಾದರಿಯಲ್ಲಿ ಜನರಿಗೆ ಪರಿಹಾರ ನೀಡಿ: ಸತೀಶ್ ಜಾರಕಿಹೊಳಿ
ಮೇ 12ರಿಂದ ನಾಸಿಕ್ ನಗರದಲ್ಲಿ ಲಾಕ್ ಡೌನ್ ನಿರ್ಬಂಧ ಜಾರಿಯಾಗಲಿದ್ದು, ಮೇ 22ರಂದು ಮುಕ್ತಾಯಗೊಳ್ಳಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್, ಆಸ್ಪತ್ರೆ ಸೇರಿದಂತೆ ಎಲ್ಲಾ ತುರ್ತು ಸೇವೆಗಳು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ವರದಿ ತಿಳಿಸಿದೆ.
ಭಾನುವಾರ ನಾಸಿಕ್ ನಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕಿನಿಂದ ಕನಿಷ್ಠ 48 ಮಂದಿ ಸಾವನ್ನಪ್ಪಿದ್ದರು. ದಿನಂಪ್ರತಿ ನಾಸಿಕ್ ನಗರದಲ್ಲಿ 4ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ. ನಾಸಿಕ್ ನಗರ 20 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಜನ ಸಂಚಾರ ನಿಷೇಧ ಸೇರಿದಂತೆ ನಿಷೇಧಾಜ್ಞೆ ಕ್ರಮಗಳನ್ನು ಏಪ್ರಿಲ್ 5ರಿಂದ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿತ್ತು. ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ನಿರ್ಬಂಧವನ್ನು ಮೇ 15ರವರೆಗೆ ವಿಸ್ತರಿಸಿದೆ. ಲಾತೂರ್ ಮತ್ತು ಸೋಲಾಪುರ್ ನಲ್ಲಿ ಸ್ಥಳೀಯವಾಗಿ ಲಾಕ್ ಡೌನ್ ಘೋಷಿಸಲಾಗಿದೆ.