Advertisement

ವಿದೇಶಿಯರಿಗೆ ನಶೆಯೇರಿಸುತ್ತಿವೆ ಸಮುದ್ರ ಬಾಳೆ ಬೀಜ!

03:50 AM Mar 04, 2017 | |

ಗಂಗಾವತಿ: ಹಂಪಿ, ಕಿಷ್ಕಿಂದ ಹಾಗೂ ವಿರೂಪಾಪುರಗಡ್ಡಿ ಪ್ರದೇಶದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಹಾಗೂ ಅಧ್ಯಯನಕ್ಕೆ ಆಗಮಿಸುವ ವಿದೇಶಿಯರಿಗೆ ಮತ್ತೇರಿಸಿಕೊಳ್ಳಲು ಈಗ ಹೊಸದೊಂದು ಮಾದಕ ವಸ್ತು ಸಿಕ್ಕಿದೆ.

Advertisement

ವಿದೇಶಿ ಪ್ರವಾಸಿಗರು ಇಲ್ಲಿನ ರೆಸಾರ್ಟ್‌ಗಳಲ್ಲಿ ವಾರ, ತಿಂಗಳುಗಟ್ಟಲೆ ಕಾಲ ಕಳೆಯುತ್ತಾರೆ. ಬೇಸಿಗೆ ಸಂದರ್ಭದಲ್ಲಿ ವಿದೇಶಿಯರು, ಐಟಿ-ಬಿಟಿ ವಲಯದ ಟೆಕ್ಕಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಬಿಸಿಲಿಗೆ ಮೈಯೊಡ್ಡುತ್ತಾರೆ, ಜಲಾಶಯ – ನದಿಯಲ್ಲಿ ಮನದಣಿಯೆ ಈಜುತ್ತಾರೆ.

ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲೂ ಮದ್ಯ- ಸಿಗರೇಟು ಇತ್ಯಾದಿ ಮಾರಾಟ ಆಗುತ್ತಿರುತ್ತದೆ.  ಗಾಂಜಾ, ಚರಸ್‌ ಇತ್ಯಾದಿಗಳ ಪೂರೈಕೆಯೂ ಕಣ್ಣೆದುರೇ ನಡೆಯುತ್ತದೆ ಈಗ ಅದರ ಜೊತೆಗೆ ಮತ್ತೆರಿಸುವ ಸಮುದ್ರಬಾಳೆಯೂ ಸೇರ್ಪಡೆಗೊಂಡಿದೆ.

ನಶೆಗಾಗಿ ಗಿಡಮೂಲಿಕೆ ಬಳಕೆ:
ಇಲ್ಲಿಗೆ ಆಗಮಿಸುವ ಕೆಲ ವಿದೇಶಿ ಪ್ರವಾಸಿಗರು ಗಾಂಜಾ ಸೇವಿಸುತ್ತಾರೆ. ಇದರೊಂದಿಗೆ ಸ್ಥಳೀಯವಾಗಿ ಗರಿಷ್ಠ ಪ್ರಮಾಣದಲ್ಲಿ ಸಿಗುವ ಸಮುದ್ರಬಾಳೆ ಎಂಬ ಗಿಡದ ಎಲೆ ಹಾಗೂ ಬೀಜಗಳನ್ನು ಸೇವಿಸಿ ಮತ್ತು ಬರಿಸಿಕೊಳ್ಳುವುದು ಸಾಮಾನ್ಯವಾಗಿದೆ. ವಿರೂಪಾಪುರಗಡ್ಡಿಯ ಬಹುತೇಕ ಅಂಗಡಿಗಳಲ್ಲಿ 1000ದಿಂದ 2000 ರೂ. ವರೆಗೆ ಸಮುದ್ರಬಾಳೆ ಬೀಜಗಳು ಮಾರಾಟವಾಗುತ್ತವೆ. ಬೀಜ ಸೇವಿಸಿದ ವ್ಯಕ್ತಿ ವಾಂತಿ ಮಾಡಿಕೊಳ್ಳುತ್ತಾನೆ. ಆ ಬಳಿಕ ಸುಮಾರು ಎರಡು ದಿನಗಳ ಕಾಲ ತನ್ನ ಸ್ಥಿಮಿತ ಕಳೆದುಕೊಂಡು ಮತ್ತಿನ ಲೋಕದಲ್ಲಿ ವಿಹರಿಸುತ್ತಾನೆ. ವಿದೇಶಿಯರು ಈ ಬೀಜಗಳನ್ನು ಮುಗಿಬಿದ್ದು ಖರೀದಿಸುವುದರಿಂದ ಇವುಗಳನ್ನು ಸಂಗ್ರಹಿಸಲು ಇಲ್ಲಿನ ಕೆಲವು ಯುವಕರು ನದಿಯ ದಂಡೆ, ಕುರುಚಲು ಕಾಡುಗಳಲ್ಲಿ ಅಡ್ಡಾಡುತ್ತಾರೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ:
ಇತಿಹಾಸ ಪ್ರಸಿದ್ಧ ಹಂಪಿ, ಕಿಷ್ಕಿಂದ ಪ್ರದೇಶ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಸಮುದ್ರ ಬಾಳೆ ಬೀಜ ಖರೀದಿ ನಡೆಯುತ್ತದೆ. ಪ್ರತಿದಿನ ಸ್ಥಳೀಯ ಕೆಲವರು ಬೀಜ ಸಂಗ್ರಹ ಮಾಡಿ ಅಂಗಡಿಗಳಿಗೆ ಕೊಡುತ್ತಾರೆ. ಅಂಗಡಿಯವರು ಸ್ಥಳೀಯರಿಂದ ಕಡಿಮೆ ಬೆಲೆಗೆ ಬೀಜ ಖರೀದಿಸಿ, ದುಬಾರಿ ಬೆಲೆಗೆ ಮಾರುವುದು ಸಾಮಾನ್ಯವಾಗಿದೆ.  ವಹಿವಾಟು ಜೋರಾಗಿಯೇ ಇದೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಇದನ್ನು ತಡೆಗಟ್ಟಬೇಕು ಎಂದು ಸ್ಥಳೀಯ  ನಾಗರಿಕರು ಆಗ್ರಹಿಸುತ್ತಿದ್ದಾರೆ.

Advertisement

ಹಂಪಿ ವಿರೂಪಾಪುರಗಡ್ಡಿ ಪ್ರದೇಶ ಐತಿಹಾಸಿಕವಾಗಿ ಮಹತ್ವದ್ದು. ಪ್ರತಿದಿನವೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ನಿಯೋಜನೆ ಮಾಡಲಾಗಿದೆ. ಸಮುದ್ರ ಬಾಳೆ ಬೀಜ ಸೇವನೆ ಮಾಡಿ ನಶೆ ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವ ಮಾಹಿತಿ ಇಲಾಖೆಗೆ ಇದೆ. ಬೀಜದ ಮಾದರಿ ಸಂಗ್ರಹ ಮಾಡಿ ತೋಟಗಾರಿಕೆ ಇಲಾಖೆ ಅಥವಾ ವಿವಿಗೆ ಕಳುಹಿಸಲಾಗುವುದು.  ಸ್ಥಳೀಯರಲ್ಲೂ ಜಾಗೃತಿ ಮೂಡಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ.
– ಡಾ| ಕೆ. ತ್ಯಾಗರಾಜನ್‌, ಕೊಪ್ಪಳ ಪೊಲೀಸ್‌ ವರಿಷ್ಠಾಧಿಕಾರಿ

– ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next