Advertisement

Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ

01:52 AM May 05, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾಗಿ ಒಂದೂವರೆ ತಿಂಗಳು ಕಳೆದಿದ್ದು, ಮೇ 7ರ ಮತದಾನದ ಅನಂತರ ರಾಜ್ಯದಲ್ಲಿ ನೀತಿ ಸಂಹಿತೆಯನ್ನು ಸಡಿಲಿಸುವಂತೆ ಚುನಾವಣ ಆಯೋಗಕ್ಕೆ ಮನವಿ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಮಾ. 16ರಂದು ದೇಶಾದ್ಯಂತ ಚುನಾವಣೆ ಘೋಷಣೆಯಾಗಿದ್ದು, ಎ. 26ರಂದು ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ.

Advertisement

ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಆ ಬಳಿಕ ರಾಜ್ಯದಲ್ಲಿ ಮತದಾನ ಇಲ್ಲ. ಮತದಾನ ಮುಗಿದರೂ ಮತ ಎಣಿಕೆ ಮತ್ತು ಫ‌ಲಿತಾಂಶಕ್ಕಾಗಿ ಜೂ. 4ರ ವರೆಗೆ ಕಾಯಲೇಬೇಕಿದೆ. ಆದರೆ ರಾಜ್ಯದಲ್ಲಿ ಒಂದೂವರೆ ತಿಂಗಳಿನಿಂದ ಸರಕಾರ, ಆಡಳಿತ ಯಂತ್ರ ಸ್ಥಗಿತವಾಗಿದೆ. ಅದರಲ್ಲೂ ಬರಗಾಲ ಇರುವುದರಿಂದ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕೆ ನೀತಿ ಸಂಹಿತೆ ಬಾಧಕವಲ್ಲದಿದ್ದರೂ ಕೆಲವೆಡೆ ಅಧಿಕಾರಿಗಳು, ಸಿಬಂದಿ ನೀತಿ ಸಂಹಿತೆಯ ನೆಪವೊಡ್ಡಿ ಎಲ್ಲವನ್ನೂ ಮುಂದೂಡುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದ ಮೇ 7ರ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಕರ್ನಾಟಕಕ್ಕೆ ಸೀಮಿತವಾಗಿ ನೀತಿ ಸಂಹಿತೆಯನ್ನು ಸಡಿಲಿಸಲು ಚುನಾವಣ ಆಯೋಗದ ಅನುಮತಿ ಕೋರುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ಸದ್ಯದಲ್ಲೇ ಚುನಾವಣ ಆಯೋಗಕ್ಕೆ ಈ ಸಂಬಂಧ ಪತ್ರ ಬರೆಯಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.

ತಮಿಳುನಾಡಿನಲ್ಲಿ ಈಗಾಗಲೇ ಮತದಾನ ಮುಗಿದಿದ್ದು, ನೀತಿ ಸಂಹಿತೆ ಸಡಿಲಗೊಳಿಸಲು ಆಯೋಗಕ್ಕೆ ಮನವಿ ಮಾಡಿದರೂ ನೀತಿ ಸಂಹಿತೆ ತೆರವಾಗಿಲ್ಲ. ಕರ್ನಾಟಕದಲ್ಲಿ ಮತದಾನ ಮುಗಿದರೂ ದೇಶದ ಬೇರೆ ಭಾಗಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಕರ್ನಾಟಕದ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಮತದಾನ ಇರುವುದರಿಂದ ನೀತಿ ಸಂಹಿತೆ ಬಿಗಿಯಾಗಿಯೇ ಇರುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next