Advertisement

ಇಮ್ರಾನ್‌ ಖಾನ್‌ಗೆ ಭಾರತೀಯರ ಚಾಟಿ

06:00 AM Dec 24, 2018 | Team Udayavani |

ಹೊಸದಿಲ್ಲಿ: “ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಅವರಿಗೆ ನಾವು ಕಲಿಸುತ್ತೇವೆ’ ಎಂದು ಹೇಳಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತದಿಂದ ತಕ್ಕ ಪ್ರತ್ಯುತ್ತರಗಳ ಸುರಿಮಳೆಯಾಗಿದೆ. ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಸೇರಿದಂತೆ ಅನೇಕರು ಇಮ್ರಾನ್‌ ಖಾನ್‌ ವಿರುದ್ಧ ಮುಗಿಬಿದ್ದಿದ್ದು, ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದ ಸಂದೇಶ ರವಾನಿಸಿದ್ದಾರೆ.

Advertisement

ಬುಲಂದ್‌ಶಹರ್‌ ಘಟನೆ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ನಾಸಿರುದ್ದೀನ್‌ ಶಾ ಭಾನುವಾರ ಇಮ್ರಾನ್‌ ಖಾನ್‌ಗೆ ತಿರುಗೇಟು ನೀಡಿದ್ದು, “ಇಮ್ರಾನ್‌ ಖಾನ್‌ ಅವರು ಅವರಿಗೆ ಸಂಬಂಧವೇ ಇಲ್ಲದ ವಿಚಾರಗಳ ಬಗ್ಗೆ ಮಾತನಾಡುವ ಬದಲು, ಅವರ ದೇಶದ ಬಗ್ಗೆ ನೋಡಿಕೊಳ್ಳಲಿ. ನಾವು 70 ವರ್ಷಗಳಿಂದಲೂ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇನೆ. ನಮ್ಮನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂದು ನಮಗೆ ಗೊತ್ತು’  ಎಂದಿದ್ದಾರೆ.

ಇದೇ ವೇಳೆ, ಅಸಹಿಷ್ಣುತೆ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌, “ಇಡೀ ಜಗತ್ತಿನಲ್ಲಿ ಭಾರತ ದಷ್ಟು ಸಹಿಷ್ಣು ರಾಷ್ಟ್ರ ಮತ್ತೂಂದಿಲ್ಲ. ಇಲ್ಲಿ ವಿವಿಧ ಧರ್ಮಗಳ ಜನರು ಸಹಬಾಳ್ವೆಯಿಂದ ಶಾಂತಿ ಯುತವಾಗಿ ಬದುಕುತ್ತಿದ್ದಾರೆ. ಭಾರತವನ್ನು ಸಬಲ, ಸಮೃದ್ಧಿಯ ಹಾಗೂ ಸ್ವಾವಲಂಬಿ ದೇಶವಾಗಿಸುವಲ್ಲಿ ಅವರೆಲ್ಲರ ಪಾತ್ರವೂ ಇದೆ. ಮುಂದೆಯೂ ಇರುತ್ತದೆ’ ಎಂದು ಹೇಳಿದ್ದಾರೆ.

ರಾಮ್‌ದೇವ್‌ ಕಿಡಿ: ಈ ನಡುವೆ, ಸಾಮೂಹಿಕ ಹಲ್ಲೆ, ಹತ್ಯೆಯಂಥ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದ್ದು, ಇನ್‌ಸ್ಪೆಕ್ಟರ್‌ನ ಜೀವಕ್ಕಿಂತ ಕೆಲವರಿಗೆ ಗೋವಿನ ಜೀವವೇ ಹೆಚ್ಚು ಎಂದು ನಾಸಿರುದ್ದೀನ್‌ ಶಾ ಆಡಿದ ಮಾತಿಗೆ ಯೋಗ ಗುರು ಬಾಬಾ ರಾಮ್‌ದೇವ್‌ ಕಿಡಿಕಾರಿದ್ದಾರೆ. ಜನಸಾಮಾನ್ಯರ ಪ್ರೀತಿಯಿಂದಾಗಿ ನಾಸಿರುದ್ದೀನ್‌ ಶಾ ಪ್ರಸಿದ್ಧರಾದರು. ನಾನಂತೂ ಈ ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ನೋಡಿಲ್ಲ, ಆದರೆ, ರಾಜಕೀಯ ಅಸಹಿಷ್ಣುತೆ ಮಾತ್ರ ಎದ್ದು ಕಾಣುತ್ತಿದೆ. ನನ್ನ ಪ್ರಕಾರ, ಭಾರತವನ್ನು ಧಾರ್ಮಿಕ ಅಸಹಿಷ್ಣು ರಾಷ್ಟ್ರ ಎಂದು ಆರೋಪಿಸುವುದು, ದೇಶದ ಘನತೆಯನ್ನು ಅವಮಾನ ಮಾಡುವುದಕ್ಕೆ ಸಮ ಎಂದಿದ್ದಾರೆ. ಆಂತರಿಕ ಹಿಂಸಾಚಾರ, ಅಸಹಿಷ್ಣುತೆ ಇಲ್ಲದಂಥ ದೇಶ ಯಾವುದೂ ಇಲ್ಲ. ಆದರೆ, ಯಾರೂ ತಮ್ಮದೇ ದೇಶದ ಮೇಲೆ ಆರೋಪ ಹೊರಿಸುವುದಿಲ್ಲ. ಹಾಗೆ ಹೊರಿಸುವವರು ದೇಶದ್ರೋಹಿಗಳು ಎಂದೂ ಹೇಳಿದ್ದಾರೆ.

ಪಾಕಿಸ್ತಾನವಲ್ಲ ಟೆರರಿಸ್ತಾನ
ಇಮ್ರಾನ್‌ ಹೇಳಿಕೆ ಬೆನ್ನಲ್ಲೇ ಭಾನುವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, “ಪಾಕಿಸ್ತಾನವು ಟೆರರಿಸ್ತಾನವಾಗಿದ್ದು, ಒಸಾಮ ಬಿನ್‌ ಲಾಡೆನ್‌ನಂಥ ನಂ.1 ಉಗ್ರನಿಗೆ ಆಶ್ರಯ ನೀಡಿದ ದೇಶವದು. ಅವರು ನಮಗೆ ಯಾವುದೇ ಪಾಠ ಮಾಡಬೇಕಾಗಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನವು ಕಾಂಗ್ರೆಸ್‌ಗೆ ಖಂಡಿತಾ ಪಾಠ ಮಾಡಬೇಕು. ಏಕೆಂದರೆ, ಆ ಪಕ್ಷವು ಪಾಕಿಸ್ತಾನವನ್ನು ದೇವತೆಗಳ ನಾಡೆಂದು ಭಾವಿಸಿದೆ ಎಂದೂ ಹೇಳುವ ಮೂಲಕ ಸಂಬಿತ್‌ ಪಾತ್ರಾ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.

Advertisement

ಪಾಕಿಸ್ತಾನವು 1947ರಿಂದಲೇ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿರುವ ರಾಷ್ಟ್ರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಅಂಥ ದೇಶದಿಂದ ಪಾಠ ಕಲಿಯಬೇಕಾದ ಅಗತ್ಯ ನಮಗಿಲ್ಲ.
–  ಮುಖ್ತರ್‌ ಅಬ್ಟಾಸ್‌ ನಖ್ವಿ , ಕೇಂದ್ರ ಸಚಿವ

ಪಾಕ್‌ ಸಂವಿಧಾನದ ಪ್ರಕಾರ, ಮುಸ್ಲಿಂ ವ್ಯಕ್ತಿ ಮಾತ್ರವೇ ಅಲ್ಲಿನ ಅಧ್ಯಕ್ಷನಾಗ ಬಹುದು. ಆದರೆ, ಭಾರತವು ವಿವಿಧ ಧರ್ಮಗಳ ಹಲವು ರಾಷ್ಟ್ರಪತಿಗಳನ್ನು ಕಂಡಿದೆ. ಎಲ್ಲರನ್ನೊಳಗೊಂಡ ರಾಜಕೀಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ನಮ್ಮಿಂದಲೇ ಖಾನ್‌ ಸಾಹೇಬ್‌ ಕಲಿಯುವುದು ಸಾಕಷ್ಟಿದೆ.
– ಅಸಾದುದ್ದೀನ್‌ ಒವೈಸಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next