ಹುಬ್ಬಳ್ಳಿ: ಪಾಕ್ ಪರ ಘೋಷಣೆ ಪ್ರಕರಣದ ಎಫ್ಐಆರ್ ನಲ್ಲಿ ರಾಜ್ಯಸಭೆ ಆಯ್ಕೆಯಾಗಿರುವ ನಾಸೀರ್ ಹುಸೇನ್ ಹೆಸರು ಸೇರಿಸಬೇಕು, ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘೋಷಣೆ ಕೂಗಿರುವ ಬಗ್ಗೆ ಕಾಂಗ್ರೆಸ್ ಅಲ್ಲಗಳೆದಿತ್ತು. ಇದೀಗ ಘೋಷಣೆ ಕೂಗಿದ್ದು ಖಚಿತವಾಗಿದೆ. ನಾಸೀರ್ ಹುಸೇನ್ ಅವರ ಬೆಂಬಲಿಗರೇ ಕೂಗಿದ್ದು, ಮೂವರ ಬಂಧನವೂ ಆಗಿದ್ದರಿಂದ ನಾಸೀರ್ ಹುಸೇನ್ ಅವರು ಹೊಣೆ ಹೊರಬೇಕಾಗುತ್ತದೆ ಎಂದರು.
ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ನೀಡುವುದು ಬೇಡ ಎಂದು ರಾಜ್ಯಸಭಾ ಸಭಾಪತಿ ಅವರಿಗೆ ಪಕ್ಷದಿಂದ ದೂರು ನೀಡುವ ಬಗ್ಗೆ ಚಿಂತನೆ ಇದೆ. ಮಂಡ್ಯದಲ್ಲಿ ಎರಡು ವರ್ಷಗಳ ಹಿಂದಿನ ಪ್ರಕರಣ ಇದೀಗ ಕೆದಕಲಾಗಿದೆ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ ನಿಜವಾದ ಅಪರಾಧಿಗಳನ್ನು ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ ಎಂದರು.
ನಮಗೆ ಪಾಕಿಸ್ತಾನ, ಅಫ್ಘಾನಿಸ್ತಾನದ ವಿಷಯಗಳ ಮೇಲೇಕೆ ನಾವು ಚುನಾವಣೆಗೆ ಹೋಗಬೇಕು, ಮೋದಿಯವರ ಆಡಳಿತ, ಅಭಿವೃದ್ಧಿಯನ್ನು ವಿಶ್ವವೇ ಮೆಚ್ಚಿದೆ. ಕಾಂಗ್ರೆಸ್ ನ ಹಲವರು ಬಿಜೆಪಿಗೆ ಬರುತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಕಾಂಗ್ರೆಸ್ ನವರು ಅವರು ಬರುತ್ತಾರೆ, ಇವರು ಬರುತ್ತಾರೆಂದು ಹೇಳಲು ಮುಂದಾಗಿದ್ದಾರೆ ಎಂದರು.
ಲೋಕಸಭಾ ಚುನಾವಣೆ 2-3 ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಟೆಂಗಿನಕಾಯಿ ಹೇಳಿದರು.