Advertisement

ಬರಲಿದೆ ನಾಸಿಕ ಲಸಿಕೆ ; ನಾಗ್ಪುರ ಸಹಿತ ಹಲವೆಡೆ ನಡೆಯಲಿದೆ ಪ್ರಯೋಗ

12:06 AM Jan 08, 2021 | Team Udayavani |

ಹೊಸದಿಲ್ಲಿ: ಕೋವಿಡ್ ಲಸಿಕೆಗಾಗಿ ಭಾರತ ಅಂಗಿತೋಳು ಮಡಚಿಕೊಳ್ಳುತ್ತಿರುವ ಹೊತ್ತಿನಲ್ಲೇ ಭಾರತ್‌ ಬಯೋಟೆಕ್‌ “ನಾಸಿಕ ಲಸಿಕೆ’ಯ ಶುಭಸುದ್ದಿ ನೀಡಿದೆ. ಈಗಾಗಲೇ “ಕೊವ್ಯಾಕ್ಸಿನ್‌’ ಲಸಿಕೆಯನ್ನು ತುರ್ತು ಬಳಕೆಗೆ ದೇಶದ ಮುಂದಿಟ್ಟಿರುವ ಸಂಸ್ಥೆ ಶೀಘ್ರದಲ್ಲೇ “ನಾಸಿಕ ಲಸಿಕೆ’ ಪ್ರಯೋಗ ನಡೆಸಲಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇನ್ನೆರಡು ವಾರಗಳಲ್ಲಿ ಪ್ರಯೋಗ ಶುರುವಾಗಲಿದ್ದು, ಈ ಕುರಿತು ಭಾರತ್‌ ಬಯೋಟೆಕ್‌, ಡಿಸಿಜಿಐಗೆ ಶೀಘ್ರದಲ್ಲಿ ಅನುಮೋದನೆ ಕೋರಲಿದೆ.

Advertisement

ಏನಿದು ನಾಸಿಕ ಲಸಿಕೆ?: ಪ್ರಸ್ತುತ ಕೇಂದ್ರ ಒಪ್ಪಿಗೆ ನೀಡಿರುವ ಲಸಿಕೆಗಳು ಚುಚ್ಚುಮದ್ದು ರೂಪದಲ್ಲಿವೆ. ಆದರೆ ನಾಸಿಕ ಲಸಿಕೆ, ಮೂಗಿನೊಳಗೆ ಬಿಡುವಂಥ ಹನಿ ರೂಪದಲ್ಲಿರುತ್ತದೆ. “ವಾಷಿಂಗ್ಟನ್‌ ಮೆಡಿಸಿನ್‌ ವಿವಿಯ ಸಹಭಾಗಿತ್ವದಲ್ಲಿ ನಾವು ನಾಸಿಕ ಲಸಿಕೆ ಸಿದ್ಧಪಡಿಸುತ್ತಿದ್ದೇವೆ. ಇದರ ಪ್ರಯೋಗ ನಾಗ್ಪುರದ ಗಿಲ್ಲುರ್ಕರ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ’ ಎಂದು ಭಾರತ್‌ ಬಯೋಟೆಕ್‌ ಮುಖ್ಯಸ್ಥ ಡಾ| ಕೃಷ್ಣ ಎಳ್ಳಾ ತಿಳಿಸಿದ್ದಾರೆ.

ನಾಸಿಕ ಲಸಿಕೆಯೇ ಬೆಸ್ಟ್‌!: “ಕೊರೊನಾ ಮೂಗಿನ ಉಸಿರಾಟದ ಮೂಲಕ ಹರಡುವ ಸೋಂಕು. ಹೀಗಾಗಿ ಇದಕ್ಕೆ ಚುಚ್ಚುಮದ್ದಿ ಗಿಂತ ನಾಸಿಕ ಲಸಿಕೆಯೇ ಅತ್ಯಂತ ಸೂಕ್ತ ಎಂದು ಜಗತ್ತಿನ ಸಂಶೋ ಧಕರು ಅಭಿಪ್ರಾಯಪಟ್ಟಿದ್ದಾರೆ’ ಎನ್ನುವುದು ಎಳ್ಳಾ ಮಾತು.

ವಿಶೇಷತೆಗಳೇನು?: ಬೇರೆ ಲಸಿಕೆಗಳು 2 ಡೋಸ್‌ ಆಗಿದ್ದರೆ, ಇದು ಕೇವಲ 1 ಡೋಸ್‌ ಮಾತ್ರ ಸಾಕು. ಚುಚ್ಚುಮದ್ದಿನ ಲಸಿಕೆಗಳು ಕೆಳ ಶ್ವಾಸಕೋಶಗಳಿಗಷ್ಟೇ ಸುರಕ್ಷತೆ ಒದಗಿಸುತ್ತವೆ. ನಾಸಿಕ ಲಸಿಕೆ ಶ್ವಾಸಕೋಶದ ಕೆಳ ಮತ್ತು ಮೇಲ್ಭಾಗಗಳೆರಡಕ್ಕೂ ರಕ್ಷಣೆ ನೀಡುತ್ತದೆ ಎನ್ನುತ್ತಾರೆ ಸಂಶೋಧಕರು.

ಎಲ್ಲೆಲ್ಲಿ ಟ್ರಯಲ್‌?: ಮೊದಲಿಗೆ ನಾಗ್ಪುರ, ಬಳಿಕ ಭುವನೇಶ್ವರ, ಪುಣೆ, ಹೈದರಾಬಾದ್‌ಗಳಲ್ಲಿ ನಾಸಿಕ ಲಸಿಕೆಯ ಟ್ರಯಲ್‌ ನಡೆದಿದೆ. 18ರಿಂದ 65 ವರ್ಷಗಳವರೆಗಿನ ಕನಿಷ್ಠ 30-45 ಆರೋಗ್ಯವಂತ ಪ್ರತಿನಿಧಿಗಳ ಮೇಲೆ ಇದರ ಪ್ರಯೋಗ ಸಾಗಲಿದೆ. ಈಗಾಗಲೇ ಅಮೆರಿಕದಲ್ಲಿ ಈ ಲಸಿಕೆಯ ಟ್ರಯಲ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಈ ಲಸಿಕೆಯಲ್ಲದೆ ಭಾರತ್‌ ಬಯೋಟೆಕ್‌, ಅಮೆರಿಕದ “ಪ್ಲುಜೆನ್‌’ ಸಂಸ್ಥೆ ಸಹಭಾಗಿತ್ವದಲ್ಲಿ ಇನ್ನೊಂದು ನಾಸಿಕ ಲಸಿಕೆಯನ್ನೂ ಸಿದ್ಧಪಡಿಸುತ್ತಿದೆ.

ಚೇತರಿಕೆ 1 ಕೋಟಿ!: ದೇಶದಲ್ಲಿ ಸೋಂಕಿನಿಂದ ಚೇತರಿಸಿ ಕೊಂಡವರ ಒಟ್ಟು ಸಂಖ್ಯೆ ಗುರುವಾರ 1,03,95,278 ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.96.36ರಷ್ಟಿದೆ. ಮತ್ತೆ ಹೊಸದಾಗಿ 20,346 ಮಂದಿಗೆ ಪಾಸಿಟಿವ್‌ ದೃಢಪಟ್ಟಿದ್ದು, 222 ಸೋಂಕಿತರು ಸಾವನ್ನಪ್ಪಿದ್ದಾರೆ.

“ಕುಬಾಸುರಾ’ ರಾಮಬಾಣ!: ಕುಬಾಸುರಾ ಕುದಿನೀರ್‌ ಕಷಾಯ ಸೇವಿಸಿದ ಸೋಂಕಿತ ಮುಂಚೂಣಿ ಆರೋಗ್ಯ ಸಿಬಂದಿಗೆ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ತ. ನಾಡು ಆರೋಗ್ಯ ಕಾರ್ಯದರ್ಶಿ ಡಾ| ರಾಧಾಕೃಷ್ಣನ್‌ ತಿಳಿಸಿದ್ದಾರೆ. ಈ ಕಷಾಯವನ್ನು ಚೆನ್ನೈನ ಸಿದ್ಧ ಇನ್ಸ್‌ಟ್ಟಿಟ್ಯೂಟ್‌ ಆಫ್ ಇಂಡಿಯಾ (ಎನ್‌ಐಎಸ್‌) ಸಿದ್ಧಪಡಿಸಿದೆ.

8 ತಿಂಗಳವರೆಗಷ್ಟೇ ಪ್ರತಿರೋಧಕ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹುಟ್ಟುವ ನೈಸರ್ಗಿಕ ಪ್ರತಿರೋಧಕಗಳು ವ್ಯಕ್ತಿಯ ದೇಹದಲ್ಲಿ ಗರಿಷ್ಠ 8 ತಿಂಗಳು ಅಥವಾ 1 ವರ್ಷದವರೆಗೆ ಮಾತ್ರವೇ ಇರುತ್ತದೆ ಎಂದು “ಜರ್ನಲ್‌ ಸೈನ್ಸ್‌’ನಲ್ಲಿ ಪ್ರಕಟಗೊಂಡ ಸಂಶೋಧನೆ ತಿಳಿಸಿದೆ. 188 ಗುಣಮುಖೀತರ ರಕ್ತದ ಮಾದರಿಗಳನ್ನು ಮರುಪರೀಕ್ಷೆಗೊಳಪಡಿಸಿದಾಗ ಈ ಸಂಗತಿ ಬಹಿರಂಗವಾಗಿದೆ.

ನೆರೆಯ ದೇಶಗಳಿಗೆ ಲಸಿಕೆ
ಸೋಂಕು ಏರುಗತಿಯಲ್ಲಿದ್ದಾಗ ಭಾರತ ನೆರೆಯ ದೇಶ ಗಳಿಗೆ ಹೈಡ್ರೋಕ್ಲೋರೋಕ್ವಿನ್‌ ಮಾತ್ರೆಗಳನ್ನು ಆದ್ಯತೆಯಲ್ಲಿ ಕಳುಹಿಸಿ ಕೊಟ್ಟಿತ್ತು. ಅದೇ ಮಾದರಿಯ ನೀತಿಯನ್ನು ನೆರೆಯ ದೇಶಗಳಿಗೆ ಲಸಿಕೆ ಪೂರೈಸುವುದರಲ್ಲಿಯೂ ಮೋದಿ ಸರಕಾರ ಅನುಸರಿಸಲಿದೆ. ನೇಪಾಲಕ್ಕೆ 12 ಮಿಲಿ ಯ ಡೋಸ್‌ ಲಸಿಕೆ ಪೂರೈಸಲು ಭಾರತ ಈಗಾಗಲೇ ಒಪ್ಪಿ ಕೊಂಡಿದೆ. ಬಾಂಗ್ಲಾದೇಶ ಆಕ್ಸ್‌ಫ‌ರ್ಡ್‌ ವಿವಿ ಲಸಿಕೆಯ 30 ಮಿಲಿಯ ಡೋಸ್‌ಗಳಿಗೆ ಇಟ್ಟ ಬೇಡಿಕೆಗೆ ಸರಕಾರ ಸಮ್ಮತಿಸಿದೆ. ಶೇಖ್‌ ಹಸೀನಾ ಸರಕಾರ ಚೀನ ಸರಕಾರದ ಲಸಿಕೆಯ ಪ್ರಯೋಗದಿಂದ ಹೊರಗುಳಿಯಲು ನಿರ್ಧ ರಿಸಿದ ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮ್ಯಾನ್ಮಾರ್‌ ಕೂಡ ಸೀರಂ ಇನ್‌ಸ್ಟಿಟ್ಯೂಟ್‌ನ ಬಾಗಿಲು ತಟ್ಟಿದೆ.

ಬಚ್ಚನ್‌ ಧ್ವನಿಗೆ ಆಕ್ಷೇಪ
ಕೊರೊನಾ ಕುರಿತು ಎಚ್ಚರಿಕೆ ವಹಿಸಬೇಕೆಂದು ಜಾಗೃತಿ ಮೂಡಿಸುವ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ರ ಧ್ವನಿಯನ್ನು ಕಾಲರ್‌ಟ್ಯೂನ್‌ನಿಂದ ತೆಗೆಯಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ಕೇಂದ್ರ ಸರಕಾರ ಜಾಗೃತಿ ಮೂಡಿಸಲು ಅಮಿತಾಭ್‌ ಬಚ್ಚನ್‌ರಿಗೆ ಹಣಕೊಡುತ್ತಿದೆ. ಸತತ ಎಚ್ಚರಿಕೆ ವಹಿಸಿದ್ದರೂ, ಬಾಲಿವುಡ್‌ ನಟ ಮತ್ತು ಅವರ ಕುಟುಂಬಕ್ಕೆ ಸೋಂಕು ತಗುಲಿದೆ. ಅವರು ಸಾಮಾಜಿಕ ಕಳಕಳಿಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿಲ್ಲ ಎಂದು ಅರಿಕೆ ಮಾಡಿಕೊಳ್ಳಲಾಗಿದೆ. ಜ. 18ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಲಸಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿನ ದಾರಿತಪ್ಪಿಸುವಂಥ ಮಾಹಿತಿಗಳನ್ನು ಆಯಾ ರಾಜ್ಯಗಳು ಕಡ್ಡಾಯವಾಗಿ ತಡೆಹಿಡಿಯಬೇಕು.
ಹರ್ಷವರ್ಧನ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next