ವಾಷಿಂಗ್ಟನ್: ನಮ್ಮ ಭೂಮಿಯ ಹೊರಗೆ ಸದ್ದು ಎಂಬುದು ಇದೆಯೇ? ಸಂಪೂರ್ಣ ನಿರ್ವಾತವೇ ಇರುವ ಅಂತರಿಕ್ಷದಲ್ಲಿ ಶಬ್ದ ಇರುವುದೇ? ಇದ್ದರೂ ಅದರ ತರಂಗಗಳು ಚಲಿಸಿ ನಮಗೆ ಕೇಳಿಸುವುದು ಸಾಧ್ಯವೇ?
ಸೌರವ್ಯೂಹದ ಹೊರಗೆ ಏನೇನಿದೆ, ಜೀವರಾಶಿ ಇದೆಯೇ ಎಂಬ ಕುತೂಹಲದಿಂದ ಬಾಹ್ಯಾಕಾಶದ ಆಳ-ಅಗಲಗಳನ್ನು ತಡಕಾಡುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಸೋಮವಾರ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಕುತೂಹಲಕಾರಿ ಟ್ವೀಟ್ ಒಂದನ್ನು ಮಾಡಿದೆ. ಅದರ ಜತೆಗೆ ಪರ್ಸಸ್ ಎಂಬ ಕೃಷ್ಣರಂಧ್ರ (ಬ್ಲ್ಯಾಕ್‌ಹೋಲ್)ನಿಂದ ಹೊರಡುತ್ತಿರುವ ಕೇಳಬಲ್ಲ ಸದ್ದಿನ ಆಡಿಯೋ ತುಣುಕನ್ನು ಅದು ಪೋಸ್ಟ್ ಮಾಡಿದೆ.
ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಇಲ್ಲದವರೂ ಬೆರಗಾಗುವಂತಹ ಆಡಿಯೋ ಕ್ಲಿಪ್ ಇದು. ಪರ್ಸಸ್ ಕೃಷ್ಣರಂಧ್ರದಿಂದ ಹೊರಬಿದ್ದ ಸದ್ದನ್ನು ಸಂಗ್ರಹಿಸಿ ಕೇಳಬಹುದಾದ ಸ್ಥಿತಿಗೆ ತಂದು ಇಲ್ಲಿ ನೀಡಲಾಗಿದೆ. ಕೃಷ್ಣರಂಧ್ರಗಳ ಶೋಧ, ಅಧ್ಯಯನದ ಬಗೆಗೂ ಇದು ಹೊಸ ಒಳನೋಟವನ್ನು ನೀಡುವಂಥದ್ದು.
ಧ್ವನಿ ತುಣುಕಿನ ಜತೆಗೆ ನಾಸಾ ಪೋಸ್ಟ್ ಮಾಡಿರುವ ವಿವರಣೆ: “ಬಾಹ್ಯಾಕಾಶ ವಿಜ್ಞಾನಿಗಳು ಈ ಹಿಂದೆಯೇ ಗುರುತಿಸಿದ್ದ ಪರ್ಸಸ್‌ನಿಂದ ಹೊರಡುವ ಈ ಧ್ವನಿಯನ್ನು ಮೊತ್ತಮೊದಲ ಬಾರಿಗೆ ಸಂಗ್ರಹಿಸಿ ಕೇಳುವಂತೆ ಮಾಡಲಾಗಿದೆ. ಕೃಷ್ಣರಂಧ್ರದ ಕೇಂದ್ರದಿಂದ ಬಹಿರ್ಮುಖವಾಗಿ ಹೊರಡುತ್ತಿರುವ ಸದ್ದುಗಳಿವು’.
ಈ ಆಡಿಯೋ-ವೀಡಿಯೋ ಪುಟ್ಟದು ನಿಜ. ಆದರೆ ಕೇಳಿದವರು ಬೆಕ್ಕಸಬೆರಗಾಗಲೇ ಬೇಕು. ವೀಡಿಯೋ ಜತೆಗೆ ಅಡಿಬರಹವನ್ನೂ ನೀಡಲಾಗಿದೆ. ಬಾಹ್ಯಾಕಾಶದ ಬಹುಭಾಗ ನಿರ್ವಾತವೇ ಇರುವುದರಿಂದ ಅಲ್ಲಿ ಸದ್ದು ಉತ್ಪತ್ತಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಗ್ಯಾಲಕ್ಸಿ ಕ್ಲಸ್ಟರ್‌ನಲ್ಲಿ ಎಷ್ಟು ಅನಿಲ ರಾಶಿ ಇದೆ ಎಂದರೆ ನಮಗೆ ನಿಜವಾದ ಸದ್ದನ್ನು ಹೆಕ್ಕಿತೆಗೆಯಲು ಸಾಧ್ಯವಾಗಿದೆ. ಅದನ್ನು ಧ್ವನಿವರ್ಧನೆಗೊಳಿಸಿ, ಇತರ ಡಾಟಾ ಜತೆಗೆ ಸಂಯೋಜಿಸಿ ಕೃಷ್ಣರಂಧ್ರವನ್ನು ಆಲಿಸಲು ಸಾಧ್ಯವಾಗುವಂತೆ ಮಾಡಿದ್ದೇವೆ ಎಂಬ ವಿವರಗಳಿವೆ.
ಆಗಸ್ಟ್ 22ರಂದು ನಾಸಾ ಪೋಸ್ಟ್ ಮಾಡಿದ ಈ ವೀಡಿಯೋ ಸಹಿತ ಟ್ವೀಟನ್ನು 61 ಲಕ್ಷ ಮಂದಿ ಅದೇ ದಿನ ಸಂಜೆಯ ವರೆಗೆ ವೀಕ್ಷಿಸಿದ್ದಾರೆ.