ನಾಸಾದ ಸುದ್ದಿ ಪುಟಗಳನ್ನು ತಿರುವಿ ಹಾಕುತ್ತಿದ್ದಾಗ ಹೊಸ ಮಾದರಿಯ ಟೈರುಗಳ ಬಗೆಗಿನ ಮಾಹಿತಿ ಇನ್ನೊಮ್ಮೆ ಕಣ್ಣರಳಿಸಿ ನೋಡುವಂತೆ ವಿಶೇಷವಾಗಿ ಸೆಳೆಯಿತು. ಅದುವೇ “ಸೂಪರ್ ಎಲಾಸ್ಟಿಕ್ ಟೈರ್”. ((SUPER ELASTIC TYRE). ರಚನೆಯಲ್ಲಿ ರಬ್ಬರ್ ಬಳಕೆ ಇಲ್ಲ. ಒಳಗೆ ಟ್ಯೂಬ್ ಇಲ್ಲ. ಗಾಳಿಯೂ ಬೇಕಿಲ್ಲ. ಪಂಚರ್ ಎಂದಿಗೂ ಸಾಧ್ಯವಿಲ್ಲ…! ಬರೀ ತಂತಿಗಳಿಂದ ಮಾಡಿರುವ ಟೈರುಗಳಿವು. ಆದರೆ ಸಾಮಾನ್ಯ ತಂತಿಗಳಲ್ಲ. ಜನಸಾಮಾನ್ಯರು ಕಂಡು ಕೇಳರಿಯದ ಐಂದ್ರಜಾಲದ ತಂತಿಗಳು…! ಇವು ವಿಶೇಷವಾಗಿ ಚಂದಿರ ಮತ್ತು ಮಂಗಳಗ್ರಹದಲ್ಲಿನ ಓಡಾಟಕ್ಕೆಂದೇ ರಚಿಸಲಾಗಿರುವ ಅತ್ಯುನ್ನತ ಬಗೆಯ ಉತ್ಕೃಷ್ಟ ತಂತ್ರಜ್ಞಾನ ಅಡಗಿರುವ ಭವಿಷ್ಯದ ಗಾಲಿಗಳು.
ಅನ್ಯಗ್ರಹದಲ್ಲಿ ಚಲಿಸಲು ಹೆದ್ದಾರಿಗಳಾಗಲೀ, ರಸ್ತೆಗಳಾಗಲೀ… ಅಲ್ಲಿಲ್ಲ…! ಕೊನೆಗೆ ಸಮತಟ್ಟಾದ ನೆಲವಾದರೂ ಸಹ ಸಿಗುವುದು ಅನುಮಾನ. ಅಲ್ಲಿರುವುದು ಬಂಡೆ, ಕಲ್ಲು, ಮಣ್ಣು, ಮರಳು, ತಗ್ಗು, ದಿನ್ನೆಗಳ ಮಿಶ್ರಣವಿರುವ ಭೂಪ್ರದೇಶ. ಜೊತೆಗೆ ವಿಪರೀತ ಹವಾಮಾನ ವೈಪರಿತ್ಯ. ಆಕಸ್ಮಿಕವಾಗಿ ಚೂಪಾದ ವಸ್ತು ತಾಗಿ ಪಂಚರ್ ಆದರೆ ಮತ್ತೆ ತುಂಬಲು ಗಾಳಿ ಸಿಗುವುದೂ ಸಹ ಅನುಮಾನ..! ಓಡಾಟಕ್ಕೆ ವಾಹನ ಬಳಸಿದರೆ ಅಲ್ಲಿ ನಮ್ಮ ರಬ್ಬರ್ ಟೈರುಗಳನ್ನು ನಂಬಲು ಸಾಧ್ಯವೇ ಇಲ್ಲ. ಮತ್ತೆ..? ಹೊಸ ಬಗೆಯ ಅತ್ಯಂತ ವಿಶ್ವಾಸಾರ್ಹತೆಯ ಮತ್ತು ಆ ವಾತಾವರಣಕ್ಕೆ ಹೊಂದುವಂತಹ ಟೈರುಗಳು ಬೇಕು..!
ನಾಸಾದ “ಗ್ಲೆನ್ ಸಂಶೋಧನಾ ಕೇಂದ್ರ” ಮತ್ತು “ಗುಡ್ ಇಯರ್ ಟೈರ್ ಸಂಸ್ಥೆ” ಜಂಟಿಯಾಗಿ ದಶಕಗಳ ಅವಿರತ ಸಂಶೋಧನೆಯ ನಂತರ S.M.A (SHAPE MEMORY ALLOY) ವಸ್ತುಗಳನ್ನು ಉಪಯೋಗಿಸಿ ಈ ವಿಶಿಷ್ಟ ಮಾದರಿಯ “ಸೂಪರ್ ಎಲಾಸ್ಟಿಕ್” ಅಥವಾ (ಒಂದು ಬಗೆಯ) “ಸ್ಪ್ರಿಂಗ್” ಟೈರುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಗಾಳಿಯ ಬದಲು “ಯಾಂತ್ರೀಕೃತ ಸ್ಪ್ರಿಂಗ್” ಗಳ ಪ್ರಯೋಗವಾಗಿಲ್ಲ. ಬದಲಿಗೆ ಸ್ಪ್ರಿಂಗ್ ನಂತೆ ತಕ್ಕಮಟ್ಟಿಗೆ ವರ್ತಿಸಬಲ್ಲ SMA ಮಾದರಿಯ ನಿಕ್ಕೆಲ್ ಟೈಟಾನಿಯಮ್ (NiTi) ಮಿಶ್ರಲೋಹದ ತಂತಿಗಳನ್ನು ಉಪಯೋಗಿಸಿದ್ದಾರೆ.
ಏನೀ SHAPE MEMORY ALLOY (SMA)?
S.M.A – ಜೀವ ಇಲ್ಲ ಆದರೆ ಜೀವಿಗಳನ್ನು ಮೀರಿಸುವಂತಹ ನೆನಪಿನ ಶಕ್ತಿಯಿದೆ. ಆಡಿಸಿ, ಬೀಳಿಸಿ, ಬಗ್ಗಿಸಿ, ಏನೇ ಮಾಡಿ, ಎಷ್ಟೇ ವಿರೂಪಗೊಳಿಸಿ ಉಹೂಂ…! ತಮ್ಮತನವನ್ನು ಬಿಡಲಾರವು. ಆದರೆ ಮೊಂಡುತನವಿಲ್ಲ…ಅಸಾಧಾರಣ ಸಹನೆ ಇದೆ. ಯಾವ ಪರಿಸ್ಥಿತಿಗೆ ಬೇಕಾದರೂ ಹೊಂದಿಕೊಳ್ಳಬಲ್ಲವು. ಒಮ್ಮೆ ಒಂದು ರೂಪ ನೀಡಿ ಹೀಗಿರುವಂತೆ ನಿರ್ದೇಶಿಸಿದರೆ ಮುಗಿಯಿತು. ನಂತರ ಅದೇ ವೇದ ವಾಕ್ಯ…! (ನಿರ್ದೇಶನ ಎಂದರೆ ನಿರ್ದಿಷ್ಟ ಉಷ್ಣಾಂಶದ ಮೂಲಕ ಅವುಗಳ ಹರಳಿನ ಸಂರಚನೆಯನ್ನು ( Crystal Structure) ಬದಲಿಸುವುದು ಎಂದು.) ನಂತರ ಎಷ್ಟೇ ಬಲ ಪ್ರಯೋಗಿಸಿ, ಹೇಗೆ ವಿರೂಪ ಗೊಳಿಸಿದರೂ, ಸ್ವಲ್ಪ ಶಾಖ ನೀಡಿದಾಕ್ಷಣ ಮತ್ತೆ ತಮ್ಮ ಮೂಲರೂಪಕ್ಕೆ (ನೆನೆಪಿಟ್ಟುಕೊಂಡಂತೆ) ಮರಳುವವು. ಅದಕ್ಕೆ ಇವುಗಳಿಗೆ ಈ ಹೆಸರು SHAPE MEMORY ALLOY.
ಸಾಮಾನ್ಯವಾಗಿ ಕಾಣುವ ಕಬ್ಬಿಣದ ತಂತಿಯನ್ನು ಬಲ ಪ್ರಯೋಗಿಸಿ ಒಮ್ಮೆ ಬಗ್ಗಿಸಿದರೆ ಅದು ತನ್ನ ಮೂಲರೂಪವನ್ನು ಕಳೆದುಕೊಂಡು ಹೊಸದಾದ ವಿರೂಪಗೊಂಡ ಸ್ಥಿತಿಯಲ್ಲಿಯೇ ಶಾಶ್ವತವಾಗಿ ಉಳಿಯುವುದು. ಆದರೆ S.M.A ಇದಕ್ಕೆ ತದ್ವಿರುದ್ಧ. ಮೂಲರೂಪಕ್ಕೆ ಮರಳುವ ಸಾಮರ್ಥ್ಯವೇ ಇವನ್ನು ವಿಭಿನ್ನವಾಗಿಸಿರುವುದು ಮತ್ತು ಲೆಕ್ಕವಿಲ್ಲದಷ್ಟು ಹೊಸ ತಂತ್ರಜ್ಞಾನಗಳಲ್ಲಿ ಬಳಸಲು ಸಹಕರಿಸುತ್ತಿರುವುದು. NiTi - ಇದೇ ಪ್ರಬೇಧಕ್ಕೆ ಸೇರಿದ ಒಂದು ಅತ್ಯಂತ ಉಪಯುಕ್ತ ವಸ್ತು.
“ಸೂಪರ್ ಎಲಾಸ್ಟಿಕ್ ಟೈರ್” ನ ವಿಶೇಷತೆ, ವಿಭಿನ್ನತೆ ಇರುವುದು ಎರಡು ಸಂಗತಿಗಳಲ್ಲಿ. ಮೊದಲನೆಯದು ಉಪಯೋಗಿಸಿರುವ ತಂತಿ NiTi ಬಗೆಯ ಮಿಶ್ರಲೋಹದ್ದು ಮತ್ತು ಮೂಲರೂಪಕ್ಕೆ ಸಾಮಾನ್ಯ ವಾತಾವರಣದ ಉಷ್ಣಾಂಶದಲ್ಲೂ (23 25 ಡಿಗ್ರಿ ಸೆಲ್ಷಿಯಸ್) ಸಹ ವಿರೂಪ ಸ್ಥಿತಿಯಿಂದ ಮೂಲರೂಪಕ್ಕೆ ತನ್ನಿಂತಾನೆ ಹಿಂದಿರುಗಲು ಸಾಧ್ಯ.
ಎರಡನೆಯದು ವಿನ್ಯಾಸ ಚಕ್ರದ ರಿಮ್ ಗೆ ಸುಮ್ಮನೆ ತಂತಿಗಳನ್ನು ಅಳವಡಿಸುವುದಿಲ್ಲ. ಒಂದಿಂಚಿನಲ್ಲಿ ಎಷ್ಟು ತಂತಿಗಳಿರಬೇಕು ? ಎರಡು ತಂತಿಗಳ ನಡುವಿನ ಅಂತರ ಎಷ್ಟಿರಬೇಕು ? ಎರಡನ್ನು ಬೆಸೆಯುವಂತೆ ಸುರುಳಿ ಹೇಗೆ ಸುತ್ತಿರಬೇಕು ? ಎರಡು ಸುರುಳಿಗಳ ನಡುವಿನ ಅಂತರ ಎಷ್ಟಿರಬೇಕು ? ಹತ್ತು ಹಲವು ಸಂಗತಿಗಳು…. ಇದು ಇಂಜಿನಿಯರ್ ಗಳ ಕೆಲಸ. ಸೂಕ್ತ ಅಂಕಿ ಸಂಖ್ಯೆಗಳಿಗೆ ತಲುಪಲು ನೂರಾರು ಪುಟಗಳ ಲೆಕ್ಕವಿರುತ್ತದೆ. ಮೊದಲ ಬಗೆಯ ತಂತಿಗಾಲಿಯ ವಿನ್ಯಾಸವನ್ನು ಮುಗಿಸುವಷ್ಟರಲ್ಲಿ ತಂತ್ರಜ್ಞರು ದಶಕಗಳನ್ನೇ ಕಳೆದಿದ್ದಾರೆ. ಪುರಸ್ಕಾರ ಎಂಬಂತೆ 2019ರಲ್ಲಿ ಪೇಟೆಂಟ್ ಗಳೂ ಸಹ ದೊರೆತಿವೆ.
ತಗ್ಗು ದಿನ್ನೆಯ ಮೇಲೆ ಚಲಿಸಿದಾಗ, ತಂತಿಗಳು ವಿರೂಪ ಗೊಳ್ಳುವವು ಮತ್ತು ಕ್ಷಣ ಮಾತ್ರವೂ ತಡವಿಲ್ಲದೆ ಮೂಲರೂಪಕ್ಕೆ ಹಿಂದಿರುಗುವವು. ಹೆಚ್ಚಿನ ಒತ್ತಡ ಮತ್ತು ಎಳೆತವನ್ನು ಸಹಸಬಲ್ಲುವಾದ್ದರಿಂದ ಈ ಹೆಸರು “ಸೂಪರ್ ಎಲಾಸ್ಟಿಕ್ ಟೈರ್”. ಟನ್ ಗಟ್ಟಲೆ ಭಾರವನ್ನು ಹೊರಬಲ್ಲವು ಮತ್ತು ಭವಿಷ್ಯದ ರೋವರ್ ಯೋಜನೆಗಳಿಗೆ ಈ ಬಗೆಯ ಚಕ್ರಗಳನ್ನೇ ಬಳಸುಲು ಯೋಚಿಸಲಾಗಿದೆ. ಎಲ್ಲಿ ಬೇಕಾದರೂ ಅಡ್ಡಿಯಿಲ್ಲದೆ ಚಲಿಸಬಲ್ಲವು ಸಾಮಾನ್ಯ ಟೈರುಗಳಿಗಿಂತ ಹೆಚ್ಚು ಸಕ್ಷಮ. ಬೆಲೆ ಕೊಂಚ ದುಬಾರಿ..ಅಷ್ಟೆ!
” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತ,
ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡಿ,
ಕೆಲವಂ ಸಜ್ಜನಸಂಗದಿಂದಂ ಅರಿಯಲ್ ಸರ್ವಜ್ಞನಪ್ಪಂ ನರಂ”
ಸೋಮೇಶ್ವರ ಶತಕ
ಪ್ರಸ್ತುತ ಸುದ್ದಿಯಲ್ಲಿರಲು ಕಾರಣ ನಾಸಾದವರು ಈ ಬಗೆಯ ಹಲವು ತಂತ್ರಜ್ಞಾನವನ್ನು ಇತರರಿಗೆ (ಷರತ್ತು ಬದ್ದ ನಿಯಮಗಳೊಂದಿಗೆ) ನೀಡಲು ಮುಂದಾಗಿದ್ದಾರೆ. ಹೊಸದಾಗಿ ಮತ್ತೆ ನಾವು ಸಂಶೋಧನೆ ಮಾಡುವುದರ ಅಗತ್ಯವಿಲ್ಲ. ಬದಲಾಗಿ ಅವರ ಪರಿಶ್ರಮದ ಎಲ್ಲಾ ಸಂಶೋಧನಾ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದರಿಂದ ಪರವಾನಗಿ ಪಡೆದು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳಬಹುದು. ಇದು ಉಚಿತ ಕಾರ್ಯ ಅಲ್ಲವೇ?
ಬಾಹ್ಯಾಕಾಶದಲ್ಲಿ ಎರಡನೆ ಅವಕಾಶ ಇರುವುದಿಲ್ಲ. ಒಂದು ಬಾರಿ ತೊಂದರೆಗೆ ಸಿಲುಕಿದರೆ ಮತ್ತೆ ಹೋಗಿ ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಅನ್ಯಗ್ರಹಕ್ಕೆಂದು ರಚಿತವಾಗಿರುವ “ಸೂಪರ್ ಎಲಾಸ್ಟಿಕ್ ಟೈರ್” ತಂತ್ರಜ್ಞಾನ ಅತ್ಯಂತ ವಿಶ್ವಾಸಾರ್ಹ..! ಮತ್ತು ಚಿಂತೆಯಿಲ್ಲದೆ ಭೂಮಿಯಲ್ಲಿ ವಾಹನದ ಗಾಲಿಗಳಾಗಿಯೂ ಸಹ ಬಳಸಬಹುದು.
ಒಮ್ಮೆ ಯೋಚಿಸಿ ದಿನನಿತ್ಯ ಎಷ್ಟು ವಾಹನಗಳು, ಎಷ್ಟು ಗಾಲಿಗಳು ಬಿಕರಿಯಾಗುತ್ತವೆ. ಹೆದ್ದಾರಿ ಸಂಚಾರಕ್ಕೆ ಒಂದು, ಕೆಸರು ಮಾರ್ಗಕ್ಕೆ ಒಂದು, ಗುಡ್ಡ ಗಾಡು ಪ್ರದೇಶಕ್ಕೆ ಇನ್ನೊಂದು, ಮರುಭೂಮಿಗೆ ಸಂಚಾರಕ್ಕೆ ಮತ್ತೊಂದು…..ಬಗೆ ಬಗೆಯ ಗಾಲಿಗಳು ಬೇಕು. ಎಲ್ಲಾ ಅಗತ್ಯಗಳನ್ನು ಒಂದೇ ಬಗೆಯ ಗಾಲಿ ಈ “ಸೂಪರ್ ಎಲಾಸ್ಟಿಕ್ ಟೈರ್” ಪೂರೈಸಬಲ್ಲುದು…! ನಮ್ಮ ಸಾಮಾನ್ಯ ಕಾರು ಎಲ್ಲೆಡೆಯೂ ಸಂಚರಿಸಬಲ್ಲುದು. ಸ್ಟಾರ್ಟ್ ಅಪ್ ಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ…! ಪ್ರಯತ್ನಿಸ ಬಹುದಲ್ಲವೇ..!
ಬಾಹ್ಯಾಕಾಶ ಯೋಜನೆಗಳು ಸಾವಿರಾರು ಕೋಟಿಯನ್ನು ಬೇಡುವಂತಹವು, ದಶಕಗಳ ಸಂಶೋಧನೆಯನ್ನು ಒಳಗೊಂಡಿರುವಂತಹವು. ಕೇವಲ ಅನ್ಯಗ್ರಹಗಳಿಗೆ ಸೀಮಿತವಾಗದೆ, ಭೂಮಿಯಲ್ಲೂ ಜನಜೀವನ ಸುಧಾರಿಸಲು ಸಹಕರಿಸುವಂತಾಗುತ್ತಿರುವುದು ಸಂತಸದ ಮತ್ತು ಸಮಾಧಾನದ ಸಂಗತಿ ಅಲ್ಲವೇ..!
*ಜಲಸುತ