ವಾಷಿಂಗ್ಟನ್: ಅಸಂಖ್ಯ ನಿಗೂಢತೆಗಳ ಆಗರವಾಗಿರುವ ಬಾಹ್ಯಾಕಾಶದಲ್ಲಿ ನಾವಿರುವ ಸೌರಮಂಡಲವನ್ನೇ ಹೋಲುವ ಹೊಸ ಸೌರಮಂಡಲವೊಂದು ಪತ್ತೆಯಾಗಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ತಿಳಿಸಿದೆ.
ನಾಸಾ ವತಿಯಿಂದ ಅಂತರಿಕ್ಷಕ್ಕೆ ಕಳುಹಿಸಲ್ಪಟ್ಟಿರುವ ಕೆಪ್ಲರ್ -90 ಗಗನ ನೌಕೆ ಈ ಮಂಡಲವನ್ನು ಪತ್ತೆ ಮಾಡಿದ್ದು, ನಮ್ಮ ಸೌರಮಂಡಲವನ್ನೇ ಹೋಲುವಂಥ ಮತ್ತೂಂದು ಸೌರಮಂಡಲ ಸಿಕ್ಕಿರುವುದು ಇದೇ ಮೊದಲು ಎಂದು ಸಂಸ್ಥೆ ಹೇಳಿದೆ.
ಎಲ್ಲಿದೆ ಈ ಮಂಡಲ?: ಭೂಮಿಯಿಂದ ಸುಮಾರು 2,200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಇದು. 2009ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಗೊಂಡ ಕೆಪ್ಲರ್ ನೌಕೆ, 2013ರಲ್ಲೇ ತನ್ನ ಸಂಚಾರ ಮುಗಿಸಿದೆ. ಆ ನಾಲ್ಕು ವರ್ಷಗಳ ಅವಧಿಯಲ್ಲಿ ಇದು ಕ್ಲಿಕ್ಕಿಸಿರುವ ಫೋಟೋ ಈಗ ಭೂಮಿಗೆ ರವಾನೆಯಾಗಿವೆ!
ವಿಶೇಷತೆ: “ನಾಸಾ’ ಸಂಸ್ಥೆಯೇ ಬಣ್ಣಿಸಿರುವಂತೆ, ನಮ್ಮ ಸೌರಮಂಡಲದ ಮಿನಿ ವರ್ಷನ್ ಅದು. ಅಲ್ಲಿ ಎಂಟು ಗ್ರಹಗಳಿವೆ. ಆ ಮಂಡಲದ ಸೂರ್ಯ ಹತ್ತಿರದಲ್ಲಿರುವ ಗ್ರಹಗಳು ಚಿಕ್ಕದಾಗಿದ್ದು, ದೂರವಿರುವ ಗ್ರಹಗಳು ಕ್ರಮೇಣ ದೊಡ್ಡ ಗ್ರಹಗಳಾಗಿವೆ. ಸೂರ್ಯನ ಸನಿಹದಲ್ಲಿರುವ ಪುಟಾಣಿ ಗ್ರಹಕ್ಕೆ ಕೆಪ್ಲರ್ 90ಐ ಎಂದು ಹೆಸರಿಸಲಾಗಿದೆ. ಇದು ಸೂರ್ಯನನ್ನು ಪ್ರತಿ 14.4 ದಿನಗಳಿಗೊಮ್ಮೆ ಸಂಪೂರ್ಣವಾಗಿ ಸುತ್ತಿಬರುತ್ತದೆ. ಇದರ ಸರಾಸರಿ ಉಷ್ಣಾಂಶ 426 ಸೆಲ್ಸಿಯಸ್. ಇತರ ಗ್ರಹಗಳ ಬಗ್ಗೆ ಸಂಶೋಧನೆ ಜಾರಿಯಲ್ಲಿದೆ.