Advertisement

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

08:43 AM Apr 24, 2024 | Team Udayavani |

ಮಂಗಳೂರು: ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಡಿಎಂಕೆ ಸೇರಿಕೊಂಡು ಕೇಂದ್ರದಿಂದ ಪರಿಹಾರ ಮೊತ್ತದಲ್ಲಿ ತಾರತಮ್ಯ ಎನ್ನುವ ರಾಜಕೀಯ ಆಖ್ಯಾನ (ನರೇಟಿವ್‌) ಸೃಷ್ಟಿಸುವ ಯತ್ನದಲ್ಲಿವೆ. ಚುನಾವಣೆಗೆ ಮೊದಲೇ ಇದನ್ನು ಯೋಜಿಸಿದ್ದರು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಪಾದಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಿಂದ 14ರ ವರೆಗೆ ಕರ್ನಾಟಕದಲ್ಲಿನ ರಾಜ್ಯ ಸರಕಾರ ಬರ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಆಗಿನ ಯುಪಿಎ ಸರಕಾರ ಶೇ. 8 ನ್ನು ಮಾತ್ರ ಕೊಟ್ಟಿತ್ತು. 2014ರಿಂದ 22ರ ವರೆಗೆ ರಾಜ್ಯದವರಿಗೆ ಎನ್‌ಡಿಎ ಸರಕಾರ ಪರಿಹಾರ ಬೇಡಿಕೆಯ ಶೇ. 38 ನ್ನು ಕೊಟ್ಟಿದೆ. ಯಾವುದೇ ರಾಜ್ಯಕ್ಕೂ ತಾರತಮ್ಯ ಆಗಿಲ್ಲ. ನಿಯಮ ಪ್ರಕಾರ ಸಿಗಬೇಕಾದಷ್ಟು ಸಿಗಲಿದೆ ಎಂದರು.

ಈ ಬಾರಿಯೂ ಸುಪ್ರೀಂ ಕೋರ್ಟ್‌ ಮುಂದೆ ಅಟಾರ್ನಿ ಜನರಲ್‌ ಅವರು ಚುನಾವಣ ಆಯೋಗದ ಅನುಮೋದನೆ ಮೇರೆಗೆ ನಿಯಮ ಪ್ರಕಾರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಣಾಳಿಕೆಯ ಎಲ್ಲ
ಅಂಶ ಪೂರ್ಣ
2019ರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಣಾಳಿಕೆಯಲ್ಲಿ 295 ಅಂಶಗಳಿದ್ದವು. ಅವೆಲ್ಲವನ್ನೂ ನಾವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಹಾಗಾಗಿ ಬಿಜೆಪಿಯನ್ನು ಮತ್ತೆ ಗೆಲ್ಲಿಸಿ ಮೋದಿಯವರ 400 ಸ್ಥಾನಗಳನ್ನು ಗೆಲ್ಲುವ ಕನಸನ್ನು ನನಸಾಗಿಸಬೇಕು ಎಂದು ಕರೆ ನೀಡಿದರು.

ಇಂದು ವಿವಿಧೆಡೆ ರೋಡ್‌ಶೋಗಳಲ್ಲಿ ಪಾಲ್ಗೊಂಡಿದ್ದೇನೆ. ಎಲ್ಲೆಡೆ ಬಿಸಿಲು ಇದ್ದರೂ ಜನರು ಖುಷಿಯಿಂದ ಪಾಲ್ಗೊಂಡಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ತಮಿಳುನಾಡು, ರಾಜಸ್ತಾನ ಇತ್ಯಾದಿ ಕಡೆ ಶಾಖಾಘಾತದಿಂದ ಮತದಾನದ ಪ್ರಮಾಣ ಕಡಿಮೆಯಾಗಿದೆ. ಹೆಚ್ಚಿನ ಸೆಖೆಯ ಹೊರತಾಗಿಯೂ ಇಲ್ಲಿನ ಮತದಾರರು ಸಕಾಲದಲ್ಲಿ ಬೂತ್‌ಗಳಿಗೆ ಬಂದು ಮತದಾನ ಮಾಡುವ ಭರವಸೆ ಇದೆ ಎಂದರು.

Advertisement

ಎಲ್ಲರಿಗೂ ನೀರು ಬೇಕು
ನಾವೆಲ್ಲರೂ ಸೋದರರು, ಕರ್ನಾಟಕ ಹಾಗೂ ತಮಿಳುನಾಡು ಜನರೆಲ್ಲರಿಗೂ ಕುಡಿಯುವ ನೀರು ಬೇಕು. ಕರ್ನಾಟಕದವರಿಗೂ ತೊಂದರೆಯಾಗಬಾರದು. ಹಾಗಾಗಿ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಮೂಲಕ ಎಲ್ಲರಿಗೂ ನ್ಯಾಯವಾದ ನೀರು ದೊರಕುತ್ತದೆ. ಈ ಬಗ್ಗೆ ಯಾವುದೇ ಭಾವನಾತ್ಮಕ ಪ್ರತಿಕ್ರಿಯೆ ಬೇಡ ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ, ರಾಜೇಶ್‌ ನಾೖಕ್‌ ಉಳಿಪಾಡಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು,ಮಾಜಿ ಅಧ್ಯಕ್ಷ ಸುದರ್ಶನ ಎಂ. ಮತ್ತಿತರರು ಉಪಸ್ಥಿತರಿದ್ದರು.

ತಮಿಳುನಾಡಿನಲ್ಲಿ ಬಿಜೆಪಿಗೆ ಎರಡಂಕಿ ಸ್ಥಾನ
ಕುಂದಾಪುರ: ತಮಿಳುನಾಡಿನಲ್ಲಿ ಬಿಜೆಪಿ ಮೈತ್ರಿಕೂಟ ಎರಡಂಕಿ ಸ್ಥಾನಗಳನ್ನು ಪಡೆದು ಇತಿಹಾಸ ನಿರ್ಮಿಸುವೆವು ಎಂದು ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿ ಮೈತ್ರಿಕೂಟ ಗಳಿಸುವ ಮತಪ್ರಮಾಣ ಹೆಚ್ಚಾಗಲಿದೆ. ತೆಲಂಗಾಣ, ತಮಿಳುನಾಡು, ಕೇರಳ ನಾಯಕರು ಐಎನ್‌ಡಿಐಎ ಒಕ್ಕೂಟದಲ್ಲಿ ಕಚ್ಚಾಡುತ್ತಿದ್ದಾರೆ. ಹೊಂದಾಣಿಕೆ ಇಲ್ಲ. ಆದ್ದರಿಂದ ದಿಕ್ಕೆಟ್ಟ ಕರ್ನಾಟಕ ಕಾಂಗ್ರೆಸ್‌ ನರೇಂದ್ರ ಮೋದಿ ಅವರ ಮೇಲೆ ಆರೋಪಿಸುತ್ತಿದೆ ಎಂದರು.

ಚೊಂಬು ಜಾಹೀರಾತು ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸೋಲಿನ ಭೀತಿಯಿಂದ ಅಂತಹ ಪ್ರಚಾರಕ್ಕೆ ಇಳಿದಿದೆ. ನೇಹಾ ಪ್ರಕರಣಕ್ಕೆ ಸಂಬಂಧಿಸಿ, ಗೃಹಸಚಿವರ ಹೇಳಿಕೆ, ಸರಕಾರ ನಡೆದುಕೊಂಡ ರೀತಿ ಸರಿ, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ-ಇದಕ್ಕೆ ಜನರು ಉತ್ತರಿಸುತ್ತಾರೆ ಎಂದರು.

ಅಣ್ಣಾಮಲೈ ಹೆಲಿಕಾಪ್ಟರ್‌ನಲ್ಲಿ ಹಣ ತರುತ್ತಾರೆ ಎಂಬ ಆರೋಪದ ಕುರಿತು, ಅನಿವಾರ್ಯ ಓಡಾಟಕ್ಕೆ ಹೆಲಿಕಾಪ್ಟರ್‌ ಬಳಸುತ್ತಿದ್ದೇನೆ. ಅದರ ತಪಾಸಣೆಗೆ ಚುನಾವಣೆ ಆಯೋಗ ನಿಯಮ ರೂಪಿಸಿ ಅಧಿಕಾರಿಗಳನ್ನು ನೇಮಿಸಿದೆ. ವ್ಯರ್ಥ ಆರೋಪಕ್ಕೆ ಏನೆನ್ನಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next