Advertisement

ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ

06:25 AM Oct 17, 2017 | Team Udayavani |

ಗಾಂಧಿನಗರ: ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೃಹತ್‌ ರ್ಯಾಲಿ ನಡೆಸಿದ್ದು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. 7 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದ ಈ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಇದು ಅಭಿವೃದ್ಧಿ ಮತ್ತು ಕುಟುಂಬ ರಾಜಕಾರಣದ ನಡುವೆ ನಡೆಯುತ್ತಿರುವ ಹೋರಾಟ ಎಂದಿದ್ದಾರೆ.

Advertisement

ಜಾತಿ ಮತ್ತು ಕೋಮು ವಿಭಜನೆಯ ಮೂಲಕ ಜನರನ್ನು ಕಾಂಗ್ರೆಸ್‌ ಹಾದಿ ತಪ್ಪಿಸುತ್ತಿದೆ. ಗುಜರಾತ್‌ನ ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ಹತ್ತಿಕ್ಕಲು ಕಾಂಗ್ರೆಸ್‌ ಎಲ್ಲ ಅವಕಾಶವನ್ನೂ ಬಳಸಿಕೊಳ್ಳುತ್ತದೆ. ಗುಜರಾತ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲರನ್ನು ಕಾಂಗ್ರೆಸ್‌ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಬೃಹತ್‌ ಪಕ್ಷವಾಗಿ ಹೊರಹೊಮ್ಮಿದೆ. ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು, ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುವಂತೆ ನಾನು ಕಾಂಗ್ರೆಸ್‌ಗೆ ಸವಾಲು ಹಾಕುತ್ತೇನೆ ಎಂದು ಹೇಳಿದ್ದಾರೆ.

“ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸುವ ನಿರ್ಧಾರವನ್ನು ಮೋದಿ ಒಂಟಿಯಾಗಿ ತೆಗೆದುಕೊಂಡಿದ್ದಲ್ಲ. ಸುಮಾರು 30 ಪಕ್ಷಗಳ ಸಲಹೆ ಪಡೆಯಲಾಗಿದೆ. ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಪ್ರಮುಖ ಪಾತ್ರ ವಹಿಸಿತ್ತು. ಜಿಎಸ್‌ಟಿ ವಿಚಾರದಲ್ಲಿ ಕಾಂಗ್ರೆಸ್‌ ಸುಳ್ಳು ಸುದ್ದಿ ಹಬ್ಬಿಸಬಾರದು’ ಎಂದೂ ಅವರು ಹೇಳಿದ್ದಾರೆ.

ಪ್ಯಾಕೇಜ್‌ ನಿರೀಕ್ಷೆ ಹುಸಿ: ಗುಜರಾತ್‌ಗೆ 12 ಸಾವಿರ ಕೋಟಿ ರೂ. ಪ್ಯಾಕೇಜ್‌ ಅನ್ನು ಈ ಸಮಾವೇಶದಲ್ಲಿ ಮೋದಿ ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಪ್ಯಾಕೇಜ್‌ ಘೋಷಣೆ ಮಾಡುವುದಕ್ಕೆಂದೇ ರಾಜ್ಯದಲ್ಲಿ ಚುನಾವಣೆ ಘೋಷಣೆ ವಿಳಂಬಗೊಳಿಸಲಾಗಿದೆ ಎಂಬ ಆರೋಪ ಕೂಡ ಮಾಡಲಾಗಿತ್ತು. ಅಲ್ಲದೆ ಸಮಾವೇಶಕ್ಕೂ ಮುನ್ನ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, “ಗುಜರಾತ್‌ನ ಹವಾಮಾನ ವರದಿ ಹೀಗಿದೆ- ಇಂದು ಹುಸಿ ಭರವಸೆಗಳ ಸುರಿಮಳೆಯಾಗಲಿದೆ’ ಎಂದು ವ್ಯಂಗ್ಯವಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next