Advertisement

ಎಡಪಂಥೀಯರ ಧಾರ್ಮಿಕ ದ್ವೇಷ ಅನಾವರಣ: ಮೋದಿ

03:29 AM Jan 16, 2019 | |

ಕೊಲ್ಲಂ/ಬಲಾಂಗಿರ್‌: ಶಬರಿಮಲೆ ವಿಚಾರವನ್ನು ನಿಭಾಯಿಸಿದ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ಕ್ರಮ ಅತ್ಯಂತ ನಿಂದನಾರ್ಹ. ಯಾವುದೇ ಪಕ್ಷದ ಸರ್ಕಾರ ಕೈಗೊಳ್ಳಬಾರದ್ದನ್ನು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ. ಎಡಪಂಥೀಯರು ದೇಶದ ಚರಿತ್ರೆ, ಸಂಸ್ಕೃತಿ, ಧಾರ್ಮಿಕ ವ್ಯವಸ್ಥೆ ಮತ್ತು ನಂಬುಗೆ ಬಗ್ಗೆ ಗೌರವ ಇರಿಸಿಕೊಂಡಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ನಂಬುಗೆ, ವ್ಯವಸ್ಥೆಗಳ ಬಗ್ಗೆ ಇಷ್ಟೊಂದು ದ್ವೇಷ ಇರಿಸಿಕೊಂಡಿದ್ದಾರೆ ಎಂಬ ವಿಚಾರ ಗೊತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.

Advertisement

ಕೊಲ್ಲಂನ ಮೇವರಂನಿಂದ ಕವನಾಡ್‌ ವರೆಗೆ 352 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 13 ಕಿ.ಮೀ. ದೂರದ ಬೈಪಾಸ್‌ ರಸ್ತೆಯನ್ನು ಮಂಗಳವಾರ ಉದ್ಘಾಟಿಸಿದ ಬಳಿಕ, ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಎಲ್‌ಡಿಎಫ್ ಮತ್ತು ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದ ಪ್ರಧಾನಿ ಮೋದಿ, ಎರಡೂ ಮೈತ್ರಿಕೂಟಗಳ ಆಡಳಿತದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ. ಕೇರಳದ ಸಂಸ್ಕೃತಿಯನ್ನು ಹಾಳು ಮಾಡುವಲ್ಲಿ ಮಾತ್ರ ಎರಡೂ ಮೈತ್ರಿಕೂಟಗಳು ಒಂದೇ ಆಗಿವೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಧೋರಣೆ ಬಗ್ಗೆ ವ್ಯಂಗ್ಯ: ಶಬರಿಮಲೆ ವಿಚಾರದಲ್ಲಿ ಕಾಂಗ್ರೆಸ್‌ ಹಲವು ರೀತಿಯ ನಿಲುವುಗಳನ್ನು ಹೊಂದಿದೆ. ಪಟ್ಟಣಂತಿಟ್ಟದಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಪಾರ್ಲಿಮೆಂಟ್‌ನಲ್ಲಿ ಮತ್ತೂಂದು ಧೋರಣೆ ಹೊಂದಿದೆ ಎಂದಿದ್ದಾರೆ ಪ್ರಧಾನಿ. ಶಬರಿಮಲೆ ದೇಗುಲದಲ್ಲಿ ನಡೆದ ಘಟನೆಗಳು ಚರಿತ್ರೆಯ ಭಾಗವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವೊಂದು ಅದನ್ನು ನಿಭಾಯಿಸಿದ ಕ್ರಮವೇ ಅತ್ಯಂತ ಆಕ್ಷೇಪಾರ್ಹ. ಎಡಪಕ್ಷಗಳಿಗೆ ದೇಶದ ಇತಿಹಾಸ, ಸಂಸ್ಕೃತಿ, ಧಾರ್ಮಿಕ ನಂಬುಗೆ ಮತ್ತು ವ್ಯವಸ್ಥೆ ಬಗೆಗಿನ ತಿರಸ್ಕಾರ ಭಾವದ ಆಳ ಎಷ್ಟು ಎನ್ನುವುದು ದೇಗುಲ ವಿಚಾರದ ನಿಭಾಯಿಸಿದರಲ್ಲೇ ಗೊತ್ತಾಯಿತು ಎಂದು ವಾಗ್ಧಾಳಿ ನಡೆಸಿದರು. ಇದೇ ವೇಳೆಸ ಸಾಮಾನ್ಯ ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ನೀಡುವ ಬಗ್ಗೆ ಸಾಂವಿಧಾನಿಕ ತಿದ್ದುಪಡಿ ಅತ್ಯಂತ ಐತಿಹಾಸಿಕ. ಇದರಿಂದ ಸಾಮಾನ್ಯ ವರ್ಗದಲ್ಲಿರುವ ಬಡವರಿಗೂ ನೆರವಾಗಲಿದೆ. ಯಾವುದೇ ರೀತಿಯ ಜಾತಿ, ಜನಾಂಗ, ಸಮುದಾಯಗಳಿಗೆ ಸಮಾನ ಅವಕಾಶ ದೊರೆಯಬೇಕು ಎನ್ನುವುದೇ ಕೇಂದ್ರದ ಆಶಯ ಎಂದು ಪ್ರಧಾನಿ ಹೇಳಿದ್ದಾರೆ.

ಸಂಸತ್‌ನಲ್ಲಿ ತ್ರಿವಳಿ ತಲಾಖ್‌ ವಿಧೇಯಕಕ್ಕೆ ಅಡ್ಡಿಪಡಿಸಿದ್ದಕ್ಕೆ ಎಡಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ ‘ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಬಗ್ಗೆ ಮಾತಾಡುತ್ತಿವೆ. ಅನುಷ್ಠಾನದ ವಿಚಾರದಲ್ಲಿ ಮಾತ್ರ ಭಿನ್ನ ಧ್ವನಿ ಹೊಂದಿವೆ ಎಂದಿದ್ದಾರೆ.

ಒಡಿಶಾದಲ್ಲಿ 1,550 ಕೋಟಿ ಮೊತ್ತದ ಯೋಜನೆ ಉದ್ಘಾಟನೆ
ಕೇರಳಕ್ಕೆ ಆಗಮಿಸುವ ಮುನ್ನ ಪ್ರಧಾನಿ ಮೋದಿ ಒಡಿಶಾದ ಬಲಾಂಗಿರ್‌ನಲ್ಲಿ 1,550 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಪ್ರವಾಸೋದ್ಯಮ, ಶಿಕ್ಷಣ, ರಸ್ತೆ ಸಂಪರ್ಕ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆ ಇದಾಗಿವೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಂ ಮೋದಿ, ಕೇಂದ್ರದಲ್ಲಿ ಆಳಿದ್ದ ಹಿಂದಿನ ಸರ್ಕಾರಗಳು ದೇಶದ ಭವ್ಯ ಸಂಸ್ಕೃತಿಯನ್ನು ನಿರ್ಲಕ್ಷಿಸಿವೆ ಎಂದು ದೂರಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳ ಮೂಲಕ ಹಿಂದಿನ ಸರ್ಕಾರಗಳು 90 ಸಾವಿರ ಕೋಟಿ ರೂ.ಗಳನ್ನು ನುಂಗಿ ಹಾಕುತ್ತಿದ್ದವು. ಅದನ್ನು ನಮ್ಮ ಸರ್ಕಾರ ನಿಲ್ಲಿಸಿದೆ ಎಂದಿದ್ದಾರೆ. ಇದೇ ವೇಳೆ, ನಕ್ಸಲ್‌ ದಾಳಿಗೆ ಬಲಿಯಾದ ದೂರದರ್ಶನದ ಕ್ಯಾಮೆರಾಮನ್‌ ಅಚ್ಯುತಾನಂದ ಸಾಹು ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

Advertisement

ಸಿಪಿಎಂ ತಿರುಗೇಟು
ಪ್ರಧಾನಿಯವರ ಟೀಕೆಗೆ ಸಿಡಿದು ಬಿದ್ದ ಸಿಪಿಎಂ, ಸುಪ್ರೀಂಕೋರ್ಟ್‌ ತೀರ್ಪು ಪಾಲನೆ ಮಾಡಿದ್ದಕ್ಕೆ ಪ್ರಧಾನಿಯವರ ಟೀಕೆ ನಿಂದನಾತ್ಮಕ ಎಂದು ಟ್ವೀಟ್ ಮಾಡಿದೆ. ಆರ್‌ಎಸ್‌ಎಸ್‌ ಪ್ರತಿಜ್ಞಾ ವಿಧಿ ಮತ್ತು ಮನುಸ್ಮತಿಯನ್ನು ಎತ್ತಿ ಹಿಡಿಯುವ ಬದಲು ಪ್ರತಿಜ್ಞಾ ವಿಧಿ ಸ್ವೀಕರಿಸಿದ ಭಾರತೀಯ ಸಂವಿಧಾ ನವನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next