Advertisement

ಕತ್ತಲಿನಲ್ಲಿದ್ದ ದೊಡ್ಡಿಗಳಿಗೆ ಮೋದಿ ಬೆಳಕಿನ “ಸೌಭಾಗ್ಯ’!

11:02 PM Jun 01, 2019 | Lakshmi GovindaRaj |

ರಾಯಚೂರು: ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.

Advertisement

ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್‌ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ ಜೂನ್‌ನಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದು ತಮ್ಮ ಸಮಸ್ಯೆ ವಿವರಿಸಿದ್ದರು.

ಅಲ್ಲದೇ 2018ರ ಸೆ.15ರಂದು ಪಿಎಂ ಟ್ವಿಟರ್‌ ಖಾತೆಗೆ ಸಮಸ್ಯೆ ಬರೆದು ಟ್ಯಾಗ್‌ ಮಾಡಿದ್ದರು. ಅದರ ಪ್ರತಿಫಲವಾಗಿ 2018ರ ಅ.1ರಂದು ರೂರಲ್‌ ಎಲೆಕ್ಟ್ರಿಕಲ್‌ ಕಾರ್ಪೊರೇಶನ್‌ ಲಿಮಿಟೆಡ್‌ ವತಿಯಿಂದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಮರೇಶಗೆ ಉತ್ತರ ಬಂತು. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ಆಯ್ದ ದೊಡ್ಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿರುವ ವಿಷಯವನ್ನು ಪತ್ರದಲ್ಲಿ ಉಲ್ಲೇಖೀಸಲಾಗಿತ್ತು.

ಶೇ.80ರಷ್ಟು ಕೆಲಸ ಪೂರ್ಣ: ವಿದ್ಯುತ್‌ ಇಲ್ಲದೇ ಚಿಮಣಿ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದ ದೊಡ್ಡಿಗಳಿಗೆ ಈಗ ಬೆಳಕಿನ ಸೌಭಾಗ್ಯ ಬಂದಂತಾಗಿದೆ. ಜೆಸ್ಕಾಂ ವಿಭಾಗೀಯ ಕಚೇರಿ ಸಹಾಯಕ ಎಂಜಿನಿಯರ್‌ ಹಳ್ಳಿಗಳಿಗೆ ತೆರಳಿ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಈಗಾಗಲೇ ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳನ್ನು ಹಾಕಿದ್ದು, ಬಹುತೇಕ ಮನೆಗಳಿಗೆ ಮೀಟರ್‌ ಅಳವಡಿಸಲಾಗಿದೆ.

ಜತೆಗೆ, ಟ್ರಾನ್ಸ್‌ಫಾರ್ಮರ್‌ ತರಲಾಗಿದ್ದು, ಒಂದೆರಡು ದಿನಗಳಲ್ಲಿ ಅಳವಡಿಸುವ ಸಾಧ್ಯತೆಯಿದೆ. ಇದು ಕೇವಲ ಮೂರು ದೊಡ್ಡಿಗಳಿಗೆ ಮಾತ್ರವಲ್ಲದೇ ಇನ್ನುಳಿದ ಹತ್ತಾರು ದೊಡ್ಡಿಗಳ ಭಾಗ್ಯದ ಬಾಗಿಲು ತೆರೆಸಿದೆ. ಜೆಸ್ಕಾಂ ಅಧಿಕಾರಿಗಳ ಮಾಹಿತಿ ಪ್ರಕಾರ 1,400 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ.

Advertisement

ಅಶಿಕ್ಷಿತರೇ ಹೆಚ್ಚು: ಚಿಕ್ಕ, ಚಿಕ್ಕ ದೊಡ್ಡಿಗಳಲ್ಲಿ ವಾಸಿಸುತ್ತಿರುವ ಈ ಜನರು ಹೆಚ್ಚಾಗಿ ಅನಕ್ಷರಸ್ಥರಾಗಿದ್ದಾರೆ. ಈ ಮೂರು ದೊಡ್ಡಿಗಳಿಗೆ ಪ್ರಾಥಮಿಕ ಶಾಲೆ, ಅಂಗನವಾಡಿ ಇದೆ. ಕೊಳವೆಬಾವಿ ನೀರಿನ ಸೌಲಭ್ಯವಿದೆ. ಕೆಲವರು ದೂರದಿಂದ ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಲೈನ್‌ ಎಳೆಸಿಕೊಂಡು ಕೃಷಿ ಮಾಡಿಕೊಂಡಿದ್ದಾರೆ. ಆದರೆ, ಉಳಿದವರ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿರದ ಕಾರಣ ವಿದ್ಯುತ್‌ ಪಡೆದಿರಲಿಲ್ಲ.

ಪದವೀಧರನ ಜಾಣ್ಮೆ: ತಮ್ಮ ದೊಡ್ಡಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಇಲ್ಲದ ಕಾರಣ ಮಾವನ ಮನೆಯಲ್ಲಿದ್ದು ಓದಿದ ಅಮರೇಶ, ಎಂಟೆಕ್‌ ಪದವಿ ಪಡೆದಿದ್ದಾರೆ. ಬಳಿಕ ಮುಂಬೈನಲ್ಲಿ ಕೆಲ ಕಾಲ ಉದ್ಯೋಗ ಮಾಡಿ ಈಗ ಪುನಃ ಊರು ಸೇರಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ತಮ್ಮ ದೊಡ್ಡಿಗಳ ಸಮಸ್ಯೆ ನೀಗದ ಕಾರಣ ಪ್ರಧಾನಿ ಕಚೇರಿಯ ಮೊರೆ ಹೋಗಿದ್ದಾರೆ. ಅವರ ಸಣ್ಣ ನಡೆ ಈಗ ದೊಡ್ಡಮಟ್ಟದ ಪ್ರತಿಫಲವನ್ನೇ ನೀಡಿದೆ.

ನನ್ನ ಚಿಕ್ಕ ಮನವಿಗೆ ಇಂಥ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾನು ನಂಬಿರಲಿಲ್ಲ. ದೊಡ್ಡಿಗಳಿಗೆ ವಿದ್ಯುತ್‌ ಬರಲು ಇಷ್ಟೆಲ್ಲ ಪ್ರಹಸನ ನಡೆದಿದೆ ಎಂದು ಅಲ್ಲಿ ವಾಸಿಸುವವರಿಗೇ ಗೊತ್ತಿಲ್ಲ. 2017ರಲ್ಲಿ ಸೌಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತು ಓದಿದ್ದೆ. ಅದನ್ನೇ ಜಾರಿಗೊಳಿಸುವಂತೆ ಮನವಿ ಮಾಡಲಾಗಿತ್ತು. ಪ್ರಧಾನಿಯವರು ಚಿಕ್ಕ, ಚಿಕ್ಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವುದರಿಂದಲೇ ಅವರಿಗೆ ಜನ ಮತ್ತೂಮ್ಮೆ ಅಧಿಕಾರ ನೀಡಿದ್ದಾರೆ.
-ಅಮರೇಶ ಗುಡುಗುಂಟಾ, ಪಿಎಂಒಗೆ ಪತ್ರ ಬರೆದ ಯುವಕ.

ಅನೇಕ ದೊಡ್ಡಿಗಳಿಗೆ ತೆರಳಿ ಶುಲ್ಕ ಪಾವತಿಸಿದರೆ ವಿದ್ಯುತ್‌ ನೀಡುವುದಾಗಿ ನಾವು ಈ ಮೊದಲೂ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಜನರು ಶುಲ್ಕ ಕಟ್ಟಲು ಮುಂದಾಗುತ್ತಿರಲಿಲ್ಲ. ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ನೀಡುವಂತೆ ನಮಗೆ ನಿರ್ದೇಶನ ಬಂದ ಕಾರಣ ಆ ಮೂರು ದೊಡ್ಡಿಗಳ ಜತೆ ಇನ್ನೂ ಅನೇಕ ಕಡೆ ವಿದ್ಯುತ್‌ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ವಿದ್ಯುತ್‌ ಸರಬರಾಜು ಆರಂಭಿಸಲಾಗುವುದು. ಅಲ್ಲಿನ ನಿವಾಸಿಗಳು ಇನ್ನು ಮುಂದೆ ಸರಿಯಾಗಿ ವಿದ್ಯುತ್‌ ಬಿಲ್‌ ಪಾವತಿಸಿದರೆ ಸಾಕು.
-ಬೆನ್ನಪ್ಪ ಕಂಬಂಟನಾಳ, ಎಇಇ, ಜೆಸ್ಕಾಂ ಲಿಂಗಸುಗೂರು ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next