Advertisement

ಬರದ ಜಿಲ್ಲೆಗೆ ಸಿಗುತ್ತಾ ಮೋದಿ ಔದರ್ಯ

07:04 AM Feb 01, 2019 | |

ಚಿಕ್ಕಬಳ್ಳಾಪುರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ ಕಳೆದ ಐದು ಬಜೆಟ್ ಬರಪೀಡಿತ ಜಿಲ್ಲೆಯ ಪಾಲಿಗೆ ತೀವ್ರ ನಿರಾಶ ದಾಯಕ. ಲೋಕಸಭೆ ಚುನಾವಣೆ ಹೊಸ್ತಿ ಲಲ್ಲಿ ತನ್ನ ಕೊನೆ ಬಜೆಟ್ ಮಂಡಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರ, ಈ ಬಾರಿ ಯಾದ್ರೂ ಔದಾರ್ಯ ತೋರುತ್ತಾ ಎಂಬು ದನ್ನು ಜನತೆ ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Advertisement

ಬಯಲುಸೀಮೆ ಜಿಲ್ಲೆಗಳ ಪೈಕಿ ತೀವ್ರ ಬರಗಾಲಕ್ಕೆ ತುತ್ತಾಗಿರುವ ಚಿಕ್ಕಬಳ್ಳಾಪುರದ ರೈತರು ಈಗಾಗಲೇ ತತ್ತರಿಸಿದ್ದಾರೆ. ಸಾಲ, ಸೋಲ ಮಾಡಿ ಇಟ್ಟ ಬೆಳೆಗೆ ಮಳೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಬೆಳೆ ನಷ್ಟ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಶಾಶ್ವತ ಜಲ ಮೂಲಗಳು ಇಲ್ಲದ ಜಿಲ್ಲೆಯಲ್ಲಿ ಹನಿ ನೀರಿಗೂ ತಾತ್ವರ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ನದಿ ಜೋಡಣೆ ಯೋಜನೆ ಈ ಬಜೆಟ್‌ನಲ್ಲಾದ್ರೂ ಕೈಗೂಡಿ ಹೆಚ್ಚಿನ ಅನುದಾನ ಅಥವಾ ಶಾಶ್ವತ ನೀರಾವರಿ ಯೋಜನೆಗಳಿಗೆ ನೆರವು ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಜಿಲ್ಲೆಯ ಆರು ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ. ಜಿಲ್ಲೆಗೆ ರಾಜ್ಯ ಸರ್ಕಾರ ರೂಪಿಸಿರುವ ಎತ್ತಿನಹೊಳೆ, ಎಚ್.ಎನ್‌.ವ್ಯಾಲಿ ಯೋಜನೆಗಳು ಮಂದಗತಿಯಲ್ಲಿ ಸಾಗಿವೆ. ಹೀಗಾಗಿ ಜಿಲ್ಲೆಗೆ ರೂಪಿಸಿರುವ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ಕೊಡುತ್ತಾ ಎಂಬುದನ್ನು ನೋಡಬೇಕಿದೆ. ಇನ್ನೂ ರಾಜ್ಯದಲ್ಲಿಯೇ ಹೆಚ್ಚು ಕೃಷಿ ಪ್ರಧಾನವಾದರೂ ಅಗತ್ಯ ಬೆಂಬಲ ಸಿಗುತ್ತಿಲ್ಲ. ದ್ರಾಕ್ಷಿ, ಹೈನುಗಾರಿಕೆ. ರೇಷ್ಮೆ ಪ್ರಧಾನವಾಗಿ ಬೆಳೆಯುವ ಜಿಲ್ಲೆಗೆ ಇದುವರೆಗೂ ಕೃಷಿ ಆಧಾರಿತ ಕೈಗಾರಿಕೆಗಳು ಪ್ರವೇಶಿಸಿಲ್ಲ. ಉದ್ಯೋಗಾವಕಾಶ ಸೃಷ್ಟಿಸುವ ಯಾವುದೇ ಕೈಗಾರಿಕೆಗಳು ಜಿಲ್ಲೆಯಲ್ಲಿ ಇರದ ಕಾರಣ ವಿದ್ಯಾವಂತ ಯುವಕ, ಯುವತಿಯರು ಕೆಲಸಕ್ಕಾಗಿ ಇತರೆಡೆಗಳಿಗೆ ವಲಸೆ ಹೋಗುವಂತಾಗಿದೆ.

52 ಕೋಟಿ ರೂ. ಬೆಳೆ ನಷ್ಟ ಪರಿಹಾರ ಬೇಕು: ಜಿಲ್ಲೆಯ ರೈತರು, ಕೃಷಿ ಕೂಲಿ ಕಾರ್ಮಿಕರು ಬೆಳೆ ನಷ್ಟದ ಪರಿಹಾರದ ನಿರೀಕ್ಷೆ ಯಲ್ಲಿದ್ದಾರೆ. ಈ ವರ್ಷ 82 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಿದ್ದ ಬೆಳೆ ಮಳೆ ಇಲ್ಲದೇ ನಷ್ಟವಾಗಿದೆ. ಜಿಲ್ಲೆಗೆ 52 ಕೋಟಿ ರೂ. ಪರಿಹಾರ ಕೇಂದ್ರ ಸರ್ಕಾರದಿಂದ ಬರಬೇಕಿದೆ. ಮುಂಗಾರು ಹಂಗಾಮಿನಲ್ಲಿ ಬರದ ಕರಿನೆರಳಿಗೆ ತುತ್ತಾದ ರೈತರು, ಕೂಲಿ ಕಾರ್ಮಿಕರು ತಮ್ಮ ಬದುಕಿನ ಬಂಡಿ ಮುನ್ನಡೆಸಲು ಪರದಾಡುವಂತಾಗಿದೆ.

21 ಕೋಟಿ ರೂ.ನರೇಗಾ ಹಣ ಬಾಕಿ: ಜಿಲ್ಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 21 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಎರಡು ತಿಂಗಳಿಂದ ಯೋಜನೆಯಡಿ ನೈಯಾಪೈಸೆ ಬಿಡುಗಡೆ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯೋಜನೆಯಡಿ ಕೂಲಿ ಕೆಲಸ ಮಾಡಿದ ಜನತೆಗೆ 10 ಕೋಟಿ ರೂ. ಕೂಲಿ ಹಣ ಬಾಕಿ ಇದ್ದರೆ, ಸಾಮಗ್ರಿ ಬಿಲ್‌ 11 ಕೋಟಿ ರೂ. ಬಾಕಿ ಇದೆ.

Advertisement

ಬರದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಆಸರೆಯಾಗಿದ್ದರೂ ಕೂಲಿ ಹಣ ಕೊಡದಿದ್ದಕ್ಕೆ ಕೂಲಿ ಕಾರ್ಮಿಕರು ನರೇಗಾ ಕೂಲಿ ಕೆಲಸ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ರೈತರು, ಕೂಲಿ ಕಾರ್ಮಿಕರಿಗೆ ಹೆಚ್ಚು ಆಸರೆ ನೀಡುವ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಮೀಸಲಿಡುತ್ತಾ ಎಂಬುದನ್ನು ಶುಕ್ರವಾರ ಮಧ್ಯಾಹ್ನನದವರೆಗೂ ಕಾದು ನೋಡಬೇಕು.

ಕಳೆದ ನಾಲ್ಕೂವರೆ ವರ್ಷದಲ್ಲಿ 5 ಬಜೆಟ್‌ಗಳನ್ನು ಮಂಡಿಸಿದರೂ ಜಿಲ್ಲೆಗೆ ಪ್ರತ್ಯೇಕವಾಗಿ ಏನನ್ನೂ ಕೊಡದ ಕೇಂದ್ರದ ಬಿಜೆಪಿ ಸರ್ಕಾರ ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲದ್ರೂ ಸಿಹಿ ಸುದ್ದಿ ನೀಡಲಿ ಎಂಬುದು ಬರದ ಜನರ ಆಸೆಯಾಗಿದೆ.

5 ವರ್ಷದಲ್ಲಿ ಜಿಲ್ಲೆಗೆ ಕೇಂದ್ರದ ಕೊಡುಗೆ ಏನು ಇಲ್ಲ: ಕಳೆದ ಐದು ವರ್ಷದಲ್ಲಿ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಬರ ಪೀಡಿತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ನಿರ್ದಿಷ್ಟವಾದ ವಿಶೇಷ ಕೊಡುಗೆ ಕೊಟ್ಟಿಲ್ಲ. ಲೋಕಸಭಾ ಚುನಾವಣೆಗೂ ಮೊದಲೇ ಪ್ರಚಾರಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ಬರ ಪರಿಸ್ಥಿತಿ ನಿವಾರಣೆಗೆ ನದಿ ಜೋಡಣೆ ಕೈಗೆತ್ತಿಕೊಳ್ಳುವುದಾಗಿ, ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಜಿಲ್ಲೆಯು ದಶಕಗಳಿಂದಲೂ ಬರಗಾಲಕ್ಕೆ ತುತ್ತಾಗುತ್ತಿದ್ದರೂ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಪೂರಕವಾಗಿ ಯಾವುದೇ ಯೋಜನೆ ಘೋಷಿಸಿಲ್ಲ. ಚುನಾವಣೆ ಬಜೆಟ್ ಆಗಿರುವುದರಿಂದ ಜಿಲ್ಲೆಯ ಜನತೆ ಮಾತ್ರ ರೈತರ ಸಾಲ ಮನ್ನಾ, ಕೃಷಿ ಕೈಗಾರಿಕೆಗಳ ಸ್ಥಾಪನೆ ಮಾಡಬಹುದೆಂದು ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next