Advertisement

ನೀರವ್‌ ಮೋದಿ ಬಂಧನ ರಾಜತಾಂತ್ರಿಕ ಗೆಲುವು 

12:30 AM Mar 22, 2019 | |

ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ ಸುಮಾರು 13,500 ಕೋ. ರೂ. ವಂಚಿಸಿ ಪಲಾಯನ ಮಾಡಿದ್ದ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಲಂಡನ್‌ನಲ್ಲಿ ಸೆರೆಯಾಗಿರುವುದು ಭಾರತಕ್ಕೆ ಸಂದಿರುವ ದೊಡ್ಡದೊಂದು ರಾಜತಾಂತ್ರಿಕ ಗೆಲುವು. 

Advertisement

ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಲಂಡನ್‌ನ ನ್ಯಾಯಾಲಯ ನೀರವ್‌ ಮೋದಿಯ ಬಂಧನಕ್ಕೆ ಆದೇಶ ನೀಡಿತ್ತು.ಕೆಲ ದಿನಗಳ ಹಿಂದೆಯಷ್ಟೇ ನೀರವ್‌ ಮೋದಿ ಹೊಸ ಅವತಾರದಲ್ಲಿ ಲಂಡನ್‌ನಲ್ಲಿ ಓಡಾಡುತ್ತಿರುವುದನ್ನು ಅಲ್ಲಿನ ಪತ್ರಕರ್ತರೊಬ್ಬರು ಪತ್ತೆ ಹಚ್ಚಿ ವರದಿ ಮಾಡಿದ್ದರು. ಈ ವರದಿ ಭಾರತದಲ್ಲಿ ಸಾಕಷ್ಟು ಸಂಚಲನವುಂಟು ಮಾಡಿತ್ತು. ಲಂಡನ್‌ನಲ್ಲಿ ನೀರವ್‌ ಮೋದಿ ಹೊಸ ವ್ಯಾಪಾರ ಪ್ರಾರಂಭಿಸಲು ಮುಂದಾಗಿದ್ದ ಹಾಗೂ ಇದಕ್ಕಾಗಿ ಬ್ಯಾಂಕ್‌ ಖಾತೆ ತೆರೆಯುವಂಥ ಪ್ರಾಥಮಿಕ ಕೆಲಸಗಳಲ್ಲಿಯೂ ತೊಡಗಿದ್ದ. 

ಈ ಸಂದರ್ಭದಲ್ಲಿ ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ಅವನ ಬಂಧನವಾಗಿರುವುದು ಭಾರತದ ಆಡಳಿತ ಯಂತ್ರ ಚುರುಕಾಗಿ ಕಾರ್ಯನಿರ್ವಹಿಸಿರುವುದರ ಫ‌ಲಿತಾಂಶ ಎನ್ನಲಡ್ಡಿಯಿಲ್ಲ. 

ಅಲ್ಲಿನ ನ್ಯಾಯಾಲಯ ನೀರವ್‌ಗೆ ಜಾಮೀನು ನಿರಾಕರಿಸಿದ್ದು ಮಾ. 29ರ ತನಕ ಅವನು ಜೈಲಿನಲ್ಲಿರಬೇಕಾಗುತ್ತದೆ. ಈ ನಡುವೆ ಭಾರತ ಅವನನ್ನು ಗಡೀಪಾರು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದೆ. ನೀರವ್‌ ಮೋದಿ ಬಂಧನದಿಂದ ಆಡಳಿತರೂಢ ಎನ್‌ಡಿಎ ಸರಕಾರವೂ ತುಸು ನಿರಾಳವಾಗಿದೆ. ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯಂಥ ದೊಡ್ಡ ವಂಚಕ ಕುಳಗಳು ರಾತೋರಾತ್ರಿ ವಿಮಾನ ಏರಿ ಪಲಾಯನ ಮಾಡಿದ್ದು ಸರಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.ಇದೀಗ ಒಬ್ಬೊಬ್ಬರನ್ನೇ ಬಂಧಿಸಿ ಹೆಡೆಮುರಿ ಕಟ್ಟಿ ತರುವ ಪ್ರಕ್ರಿಯೆ ಶುರುವಾಗಿರುವುದರಿಂದ ಚುನಾವಣೆ ಸಂದರ್ಭದಲ್ಲಿ ದೊಡ್ಡದೊಂದು ಮುಜುಗರದಿಂದ ಸರಕಾರ ಪಾರಾದಂತಾಗಿದೆ. 

ಈ ಪೈಕಿ ವಿಜಯ್‌ ಮಲ್ಯನನ್ನು ಕೆಲವು ತಿಂಗಳ ಹಿಂದೆಯೇ ಬಂಧಿಸಲಾಗಿತ್ತು. ಆತನೀಗ ಅಲ್ಲಿ ಜಾಮೀನು ಮೇಲೆ ಓಡಾಡುತ್ತಿದ್ದಾನೆ. ಇದೀಗ ನೀರವ್‌ ಮೋದಿ ಪ್ರಕರಣವೂ ಇದೇ ಹಾದಿಯಲ್ಲಿದೆ. ಮಲ್ಯ, ನೀರವ್‌ರಂಥ ಚಾಣಾಕ್ಷರು ನ್ಯಾಯಾಲಯಗಳಲ್ಲಿ ಪ್ರಕರಣದ ವಿಚಾರಣೆಯನ್ನು ವಿಳಂಬಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಏನಾದರೊಂದು ಕುಂಟು ನೆಪಗಳನ್ನು ತೆಗೆಯುತ್ತಾ ಅವರು ಗಡೀಪಾರಾಗುವುದನ್ನು ಮುಂದೂಡುತ್ತಿರುತ್ತಾರೆ. ಮಲ್ಯ ಪ್ರಕರಣವನ್ನೇ ಗಮನಿಸಿದರೆ ಮೊದಲು ಭಾರತದ ಜೈಲು ತನಗೆ ಸುರಕ್ಷಿತವಾಗಿಲ್ಲ ಎಂದ, ಅನಂತರ ಜೈಲಿನಲ್ಲಿ ಸೌಕರ್ಯ ಇಲ್ಲ ಎಂದ, ಭಾರತಕ್ಕೆ ಹೋದರೆ ಪ್ರಾಣಭಯ ಇದೆ ಎಂದು ಇನ್ನೊಂದು ತಗಾದೆ ತೆಗೆದ.ಇವೆಲ್ಲ ಫ‌ಲ ನೀಡದಿದ್ದಾಗ ಸಾಲ ತೀರಿಸುವ ಪ್ರಸ್ತಾವವನ್ನೂ ಮಂಡಿಸಿದ.ಹೀಗೆ ಪ್ರತಿ ವಿಚಾರಣೆ ಸಂದರ್ಭದಲ್ಲಿ ಏನಾದರೊಂದು ನೆಪಗಳನ್ನು ಮುಂದಿಟ್ಟುಕೊಂಡು ವಿಚಾರಣೆಯನ್ನು ವಿಳಂಬಿಸುತ್ತಿದ್ದಾನೆ. ಇವೆಲ್ಲ ಗಣ್ಯ ಆರ್ಥಿಕ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಮಾಡುವ ಕಸರತ್ತುಗಳಷ್ಟೆ. ನೀರವ್‌ ಮೋದಿ ಪ್ರಕರಣದಲ್ಲಿ ಹೀಗಾಗದಂತಿರಲು ನಮ್ಮ ತನಿಖಾ ಸಂಸ್ಥೆಗಳು ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳಬೇಕು. ಯಾವ ಕಾರಣಕ್ಕೂ ಅಲ್ಲಿನ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಹಿನ್ನಡೆಯಾಗದಂತೆ ಸಾಕಷ್ಟು “ಹೋಮ್‌ವರ್ಕ್‌’ ಮಾಡಿಕೊಳ್ಳಬೇಕು. 

Advertisement

ಗಡೀಪಾರು ಪ್ರಕ್ರಿಯೆ ತ್ವರಿತಗೊಳಿಸುವ ಹೊಣೆಗಾರಿಕೆ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯದಲ್ಲಿ ಅವುಗಳನ್ನು ಪ್ರತಿನಿಧಿಸುವ ಕಾನೂನು ತಜ್ಞರ ಮೇಲಿದೆ. 

ಭಾರತದಲ್ಲಿ ದೊಡ್ಡ ಮೊತ್ತದ ವಂಚನೆ ಎಸಗಿ ವಿದೇಶಗಳಲ್ಲಿ ಹಾಯಾಗಿರಬಹುದು ಎಂಬ ಉದ್ಯಮಿಗಳ ಲೆಕ್ಕಾಚಾರ ಈಗ ಬುಡಮೇಲಾಗುತ್ತಿದೆ. ಇದಕ್ಕೆ ಸರಕಾರ ಕೈಗೊಳ್ಳುತ್ತಿರುವ ಕಠಿನ ಕ್ರಮಗಳು ಹಾಗೂ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ನಡೆಸುತ್ತಿರುವ ಹೋರಾಟ ಕಾರಣ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿರುವ ದೇಶದ ವರ್ಚಸ್ಸು ಕೂಡಾ ವಿದೇಶಗಳಲ್ಲಿ ಬಚ್ಚಿಟ್ಟಕೊಂಡವರನ್ನು ಕರೆತರಲು ನೆರವಾಗುತ್ತಿದೆ. ಕೆಲ ಸಮಯದ ಹಿಂದೆಯಷ್ಟೇ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ದಲ್ಲಾಳಿ ಕ್ರಿಶ್ಚಿಯನ್‌ ಮೈಕೆಲ್‌ನನ್ನು ಯುಎಇ ಹೆಚ್ಚು ತಕರಾರಿಲ್ಲದೆ ಭಾರತಕ್ಕೆ ಗಡೀಪಾರು ಮಾಡಿರುವುದು ಇದಕ್ಕೊಂದು ಉದಾಹರಣೆ. ಅಪರಾಧಿ ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನಿನ ಉರುಳಿನಿಂದ ಪಾರಾಗಲು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀರವ್‌ ಮತ್ತು ಮಲ್ಯ ಪ್ರಕರಣಗಳಿಂದ ರವಾನೆಯಾಗಿದೆ. 2016ರಲ್ಲಿ ಜಾರಿಗೆ ಬಂದಿರುವ ದಿವಾಳಿ ಕಾಯಿದೆ ಮತ್ತು 40ಕ್ಕೂ ಹೆಚ್ಚು ದೇಶಗಳೊಂದಿಗೆ ಮಾಡಿಕೊಂಡಿರುವ ಅಪರಾಧಿಗಳ ಗಡೀಪಾರು ಒಪ್ಪಂದ ಆರ್ಥಿಕ ಅಪರಾಧಿಗಳು ಹಾಗೂ ಕ್ರಿಮಿನಲ್‌ ಪ್ರಕರಣದ ಆರೋಪಿಗಳನ್ನು ವಿದೇಶಗಳಿಂದ ಕರೆತರಲು ನೆರವಾಗುತ್ತಿದೆ. ಇದೀಗ ಬ್ಯಾಂಕುಗಳಿಗೆ ಆಗಿರುವ ವಂಚನೆಯ ಮೊತ್ತವನ್ನು ಅಪರಾಧಿಗಳಿಂದ ವಸೂಲು ಮಾಡಿ, ಅವರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುವ ಮೂಲಕ ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next