Advertisement

ಭ್ರಷ್ಟಾಚಾರ, ಕಪ್ಪು ಹಣ ನಿಯಂತ್ರಣ, ಪರಿಸರರಕ್ಷಣೆ ಪ್ರಧಾನಿ ಮೋದಿ ಮನವಿ

03:51 PM Feb 06, 2017 | Karthik A |

ಉಡುಪಿ: ಸಮಾಜದಲ್ಲಿ ಬೇರೂರಿರುವ ಅಜ್ಞಾನ, ತಪ್ಪು ನಂಬಿಕೆಗಳು, ಭ್ರಷ್ಟಾಚಾರ, ಕಪ್ಪುಹಣ ತೊಡೆದು ಹಾಕಲು ಮತ್ತು ಪರಿಸರ ಸಂರಕ್ಷಣೆ, ಸ್ವಚ್ಛತೆಯ ಕೆಲಸಕ್ಕೆ ಸಾಧುಸಂತರು ಜನರಲ್ಲಿ ಜಾಗೃತಿ ಮೂಡಿಸಿ ದೇವ ಪೂಜೆ ಜತೆ ರಾಷ್ಟ್ರಪೂಜೆಯನ್ನು (ಭಾರತ ಮಾತಾ ಪೂಜೆ) ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿನಂತಿಸಿದ್ದಾರೆ. ಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಅಂಗವಾಗಿ ರವಿವಾರ ಮಧ್ವನವಮಿಯಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತ ಜನರನ್ನುದ್ದೇಶಿಸಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಜನಶಕ್ತಿಯೇ ನಿಜವಾದ ಶಕ್ತಿ. ಜನಶಕ್ತಿಗೆ ಸರಿಯಾದ ಮಾರ್ಗದರ್ಶನ ತೋರಬೇಕಾಗಿದೆ ಎಂದರು. ‘ಏಕಂ ಸತ್‌ ವಿಪ್ರಾಃ ಬಹುಧಾವದಂತಿ’, ‘ವಸುಧೈವ ಕುಟುಂಬಕಂ’ ಎಂಬ ಪ್ರಾಚೀನ ಭಾರತೀಯರ ಉಕ್ತಿಯಂತೆ ಸಾವಿರಾರು ವರ್ಷಗಳಿಂದ ಸಂತರು, ಋಷಿಮುನಿಗಳು ತೋರಿದ ಮಾರ್ಗದಲ್ಲಿ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ಭಾರತದ ಪರಂಪರೆಗೆ ಇದೆ. ಇಂದು ಕಾಡುತ್ತಿರುವ ಮೂಲಭೂತವಾದಕ್ಕೆ ‘ವಸುಧೈವ ಕುಟುಂಬಕಂ’ ನೀತಿಯಲ್ಲಿ ಪರಿಹಾರವಿದೆ ಎಂದು ಮೋದಿ ಹೇಳಿದರು.

Advertisement

ಭಕ್ತಿ ಆಂದೋಲನದ ಮೂಲ
ಮಧ್ವಾಚಾರ್ಯರು, ರಾಮಾನುಜಾಚಾರ್ಯರ ಕಾಲದಿಂದ ಭಕ್ತಿ ಆಂದೋಲನ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮಧ್ಯಭಾರತ ಹೀಗೆ ಇಡೀ ದೇಶವ್ಯಾಪಿ ಪಸರಿಸಿತು. ಇವರು ರಾಷ್ಟ್ರಕ್ಕೆ ಒಂದು ಚೇತನಪ್ರಾಯರು. ಅನಂತರ ನಿಂಬಾರ್ಕರು, ವಲ್ಲಭರು, ಗೋಸ್ವಾಮಿ ತುಳಸೀದಾಸರು, ಚೈತನ್ಯದೇವರು, ಗುರುನಾನಕರು, ರಮಾನಂದರು, ಕಬೀರರು, ಸೂರದಾಸ್‌ ಹೀಗೆ ಕಾಲ ಕಾಲಕ್ಕೆ ಜನಿಸಿದ ಸಂತ, ಮಹಂತರು, ಜ್ಞಾನಿಗಳು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆ ಸಲ್ಲಿಸಿದರು. ಶಂಕರಾಚಾರ್ಯರು ನಾಲ್ಕು ಕಡೆ ಮಠಗಳನ್ನು ಸ್ಥಾಪಿಸಿದರು. ಉಡುಪಿ ಮಧ್ವರ ಕರ್ಮಭೂಮಿ, ಪೂಣ್ಯಭೂಮಿ. ಅವರು ಗೀತಾಭಾಷ್ಯವನ್ನು ಉಡುಪಿಯಲ್ಲೇ ರಚಿಸಿದರು. ಉಡುಪಿಯಲ್ಲಿರುವುದು ದ್ವಾರಕೆಯಿಂದ ಬಂದ ಶ್ರೀಕೃಷ್ಣ ಎಂದು ಕೇಳಿ ಸಂತೋಷವಾಗುತ್ತಿದೆ ಎಂದರು.

ಸಂತರ ಸಾಮಾಜಿಕ ಕೊಡುಗೆ
ರಾಮಾನುಜರು, ಚೈತನ್ಯರು ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದರು. ಮಧ್ವಾಚಾರ್ಯರು ಕೇವಲ ಆಧ್ಯಾತ್ಮಿಕ ವಿಷಯಗಳನ್ನು ಹೇಳದೆ ಯಜ್ಞದಲ್ಲಿ ಕೊಡುತ್ತಿದ್ದ ಪಶುಬಲಿಯನ್ನು ನಿಷೇಧಿಸಿದ್ದರು. ಯಾವುದೇ ವೃತ್ತಿ ಕೀಳಲ್ಲ, ಎಲ್ಲ ಕಾಯಕವೂ ಸಮಾನ ಎಂದು ಬೋಧಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮೋಕ್ಷ ಪ್ರಾಪ್ತಿಗಾಗಿ ಕರ್ಮ- ಜ್ಞಾನದ ಜತೆಗೆ ಸಮಾಜ ಸೇವೆ ಮಾಡಬೇಕೆಂದರು. ಇದು ನಾವು ಸರಕಾರಕ್ಕೆ ಸಲ್ಲಿಸುವ ತೆರಿಗೆಯಂತೆ ಕಡ್ಡಾಯ ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಹೇಳಿದ್ದರು. ಅನಂತರದ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರು, ದಯಾನಂದ ಸರಸ್ವತಿ, ಜ್ಯೋತಿ ರಾವ್‌ ಫ‌ುಲೆ, ಡಾ| ಅಂಬೇಡ್ಕರ್‌, ಗಾಂಧೀಜಿ, ವಿನೋಬಾ ಭಾವೆ ಮೊದಲಾದವರು ಸಮಾಜ ಸುಧಾರಣೆಗೆ ಪ್ರಯತ್ನಿಸಿ ಸಮಾಜದಲ್ಲಿ ಸಾಮರಸ್ಯವನ್ನು ತುಂಬಿಸಿದರು. ಸ್ವಯಂ ನಿಯಂತ್ರಣದಿಂದ ಭ್ರಷ್ಟಾಚಾರಕ್ಕೆ ನಿಯಂತ್ರಣ ಸಾಧ್ಯ ಎಂದು ಮೊದಲ ಸಂಸತ್‌ ಆದ ಅನುಭವ ಮಂಟಪದ ಮೂಲಕ ಜಾರಿಗೊಳಿಸಿದ ಬಸವೇಶ್ವರರು ಭ್ರಷ್ಟಾಚಾರ ತಡೆಗೆ ಮಾರ್ಗೋಪಾಯ ಸೂಚಿಸಿದರು.

ಪ್ರಕೃತಿಯಲ್ಲಿ ಪರಮಾತ್ಮ: ಬೋಸ್‌ ಪ್ರಯೋಗ
ಸ್ವಚ್ಛತೆ ಜಾಗೃತಿ ಎಲ್ಲೆಡೆ ಆಗಬೇಕು. ಇದು ಸರಕಾರದಿಂದ ಮಾತ್ರ ಆಗದು. ಈಗ ಪರಿಸರ ಸಮಸ್ಯೆ ಕಾಣುತ್ತಿದೆ. ಗಿಡಮರಗಳಿಗೂ ಪೂಜೆ ಸಲ್ಲಿಸುತ್ತಿದ್ದ ನಮ್ಮ ಪೂರ್ವಜರು ಪರಿಸರ ಕಾಳಜಿಯನ್ನು ಆಗಲೇ ಪ್ರಕಟಿಸಿದ್ದರು. ಪ್ರತಿಯೊಂದು ಜೀವಜಂತು, ವನಸ್ಪತಿಗಳಿಗೆ ಸಂವೇದನೆ ಇದೆ, ಪರಮಾತ್ಮನಿದ್ದಾನೆ. ಅದಕ್ಕಾಗಿಯೇ ಭಾರತೀಯರು ಪ್ರಕೃತಿ ಮಾತೆ ಎಂದು ಸಂಬೋಧಿಸಿದರು. ಇದನ್ನೇ ಜಗದೀಶ್ಚಂದ್ರ ಬೋಸ್‌ ಅವರು ಪ್ರಯೋಗಾಲಯದಲ್ಲಿ ಗಿಡಮರಗಳಿಗೆ ಜೀವವಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಇದನ್ನು ಉಳಿಸುವುದೇ ಸೇವೆಗೆ ಇರುವ ಮಾಧ್ಯಮಗಳಲ್ಲಿ ಒಂದು ಎಂದರು.

ಸಂತ- ಸಮಾಜ- ಸರಕಾರ- ಸಹಕಾರ
ಮಧ್ವಾಚಾರ್ಯರು ಉತ್ತರ ಭಾರತದ ಯಾತ್ರೆಯ ವೇಳೆ ಮುಸ್ಲಿಂ ಸೈನಿಕರು ಎದುರಿಸಿದಾಗ ನಿಮ್ಮ ದೇವರೂ ನಮ್ಮ ದೇವರೂ ಒಂದೇ ಎಂಬ ವಿಶ್ವ ಬಂಧುತ್ವ ಸಂದೇಶವನ್ನು 700 ವರ್ಷಗಳ ಹಿಂದೆಯೇ ಸಾರಿದ್ದರು. ರಾಷ್ಟ್ರವೆಂಬ ರಥವನ್ನು ಅರ್ಜುನನಂತೆ ಏರಿದ್ದೀರಿ. ಇದಕ್ಕೆ ಶ್ರೀಕೃಷ್ಣ ಸಾರಥಿಯಾಗಿ ಮಾರ್ಗದರ್ಶನ ತೋರಲಿ. ಸಂತರು- ಸಮಾಜ- ಸರಕಾರ ಪರಸ್ಪರ ಸಹಕಾರದಿಂದ ರಾಷ್ಟ್ರದ ಕಲ್ಯಾಣವಾಗಲಿ ಎಂದು ಪೇಜಾವರ ಶ್ರೀಗಳು ಹಾರೈಸಿದರು.

Advertisement

ಶ್ರೀ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರಧಿತೀರ್ಥ ಶ್ರೀಪಾದರು, ಶ್ರೀ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬನ್ನಂಜೆ ಶ್ರೀ ರಾಘವೇಂದ್ರತೀರ್ಥರು, ಬೆಂಗಳೂರಿನ ಶ್ರೀ ವಿಶ್ವಗುರುಪ್ರಿಯತೀರ್ಥರು, ಶ್ರೀ ವಿಶ್ವನಂದನತೀರ್ಥರು ಉಪಸ್ಥಿತರಿದ್ದರು. ವೈದ್ಯ ಡಾ| ತನ್ಮಯ ಗೋಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

2ರಲ್ಲಿ  ಸ್ವಯಂಸೇವಕ, 5ರಲ್ಲಿ ಪ್ರಧಾನಸೇವಕ
ಉಡುಪಿ ಶ್ರೀಕೃಷ್ಣ ಮಠದಲ್ಲಿ ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಸ್ವಯಂಸೇವಕರಾಗಿ ಬಂದಿದ್ದಿರಿ. ಐದನೇ ಪರ್ಯಾಯದಲ್ಲಿ ಪ್ರಧಾನಮಂತ್ರಿಯಾಗಿದ್ದೀರಿ. ಯಾಂತ್ರಿಕ ರೂಪದಲ್ಲಿ ಈಗ ಕಾಣಿಸಿಕೊಂಡಿದ್ದು ಅಷ್ಟು ತೃಪ್ತಿ ತಂದಿಲ್ಲ. ಮುಂದಿನ ದಿನಗಳಲ್ಲಿ ಉಡುಪಿಗೆ ಸ್ವಯಂ ಆಗಮಿಸಬೇಕು ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ನನಗೂ ಯಾಂತ್ರಿಕವಾಗಿ ಕಾಣಿಸಿಕೊಂಡಿರುವುದು ಅಷ್ಟು ತೃಪ್ತಿ ತಂದಿಲ್ಲ. ಕೆಲಸದ ಒತ್ತಡದಿಂದ ಬರಲಾಗಲಿಲ್ಲ. ದೇವರ ಇಚ್ಛೆ ಇದ್ದರೆ ಮುಂದಿನ ದಿನಗಳಲ್ಲಿ ಬರುತ್ತೇನೆ ಎಂದು ಮೋದಿ ಹೇಳಿದರು.

5ನೇ ಪರ್ಯಾಯ ಭಾಗ್ಯ ಏಕೆ? ಹೇಗೆ ಬಂತು?
ಪೇಜಾವರ ಶ್ರೀಗಳು ಎಂಟನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ 80 ವರ್ಷಗಳ ಸುದೀರ್ಘ‌ ಸನ್ಯಾಸದ ಬದುಕಿನಲ್ಲಿ ದೇಶಾದ್ಯಂತ ಸಂಚರಿಸಿ ಸಮಾಜ ಮತ್ತು ದೇಶಕ್ಕೆ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆ, ಗೋಸಂರಕ್ಷಣೆ, ಜಾತೀಯತೆ ಅನಿಷ್ಟಗಳ ನಿವಾರಣೆಯೇ ಮೊದಲಾದ ವಿಷಯಗಳಿಗೆ ಮಾರ್ಗದರ್ಶನ ಮಾಡಿದ ಕಾರಣದಿಂದಲೇ ಐದನೇ ಪರ್ಯಾಯ ಭಾಗ್ಯ ದೊರಕಿದೆ ಎಂದು ಮೋದಿ ಬೆಟ್ಟು ಮಾಡಿದರು.

ಗುಜರಾತ್‌ನಿಂದ ಬಂದ ಕೃಷ್ಣ!
ಉಡುಪಿಯ ಶ್ರೀಕೃಷ್ಣನ ವಿಗ್ರಹ ಗುಜರಾತ್‌ನ ದ್ವಾರಕೆಯಿಂದ ಬಂದದ್ದು. ಆಗ ಶ್ರೀಕೃಷ್ಣ ಸಮೃದ್ಧ ರಾಜ್ಯವನ್ನಾಗಿ ಮಾಡಿದ್ದ. ಈಗ ಗುಜರಾತಿನವರಾದ ಪ್ರಧಾನಿ ಭಾರತವನ್ನು ಸಮರ್ಥ ರಾಷ್ಟ್ರವನ್ನಾಗಿ ರೂಪಿಸಬೇಕು ಎಂದು ಪೇಜಾವರ ಶ್ರೀಗಳು ಹಾರೈಸಿದರು.

1968ರ ನೆನಪು
1968ರಲ್ಲಿ ಉಡುಪಿ ನಗರಸಭೆ ಅಧಿಕಾರವನ್ನು ಜನಸಂಘ ಪಡೆದು ನಾಲ್ಕು ದಶಕಗಳ ಕಾಲ ಮುಂದುವರಿದುದನ್ನು, ಆಗಿನ ಆಡಳಿತ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ದೇಶದಲ್ಲಿಯೇ ಮೊದಲ ಬಾರಿ ನಿಷೇಧಿಸಿಧಿದ್ದನ್ನು, ಅನಂತರ ಎರಡು ಬಾರಿ ಸ್ವಚ್ಛ ನಗರವೆಂಬ ಪ್ರಶಸ್ತಿ ಪಡೆದುದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು.

ಹೌಸ್‌ಫ‌ುಲ್‌
ಸುಮಾರು 30 ನಿಮಿಷ ಮೋದಿ ಮಾತನಾಡಿದರು. ಜನ ಕಿಕ್ಕಿರಿದು ತುಂಬಿದ್ದರು. ಅವರ ಮಾತಿಗೆ ಆಗಾಗ್ಗೆ ಚಪ್ಪಾಳೆಯ ಪ್ರಶಂಸೆ ವ್ಯಕ್ತವಾಗುತ್ತಿತ್ತು. ಜನರಿಗೆ ನೋಡಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

ಪ್ರಧಾನಿ ಟ್ವೀಟ್‌
ಜಗದ್ಗುರು ಶ್ರೀ ಮಧ್ವಾಚಾರ್ಯರ ಸಪ್ತ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಪ್ರಧಾನಿ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್‌: ಹಲವರ ಪಾತ್ರ
ವೀಡಿಯೋ ಕಾನ್ಫರೆನ್ಸ್‌ಗೆ ಎರಡು ವೇದಿಕೆಗೆ, ಒಂದು ಸಭೆಗೆ ಒಟ್ಟು ಮೂರು ಕೆಮರಾಗಳನ್ನು ಅಳವಡಿಸಲಾಗಿತ್ತು. ತಾಂತ್ರಿಕ ಜವಾಬ್ದಾರಿಗಳನ್ನು ಸಿಸ್ಕಾಮ್‌ನ ವಾದಿರಾಜ ಆಚಾರ್ಯ, ಸುಹಾಸ್‌ ಕಾಮತ್‌ ನಿರ್ವಹಿಸಿದ್ದರು. ಪರದೆ, ಕೆಮರಾ ಇತ್ಯಾದಿ ಪರಿಕರಗಳನ್ನು ಮಣಿಪಾಲ ವಿ.ವಿ.ಯವರು ನೀಡಿದ್ದರು. ದೂರದರ್ಶನದಲ್ಲಿ ಪ್ರಸಾರಗೊಳ್ಳುವಾಗ ಸಭಾಸದರನ್ನೂ ತೋರಿಸಿದರು. ಆದರೆ ಮೋದಿಯವರು ಭಾಷಣ ಆರಂಭಿಸಿದ ಬಳಿಕ ಕೊನೆಯಾಗುವವರೆಗೆ ಸಭಾಸದರನ್ನು ಸಭೆಯಲ್ಲಿ ತೋರಿಸಲಿಲ್ಲ. ಮಠದಿಂದ ಪ್ರಧಾನಮಂತ್ರಿ ಕಚೇರಿಗೆ ಪತ್ರ ವ್ಯವಹಾರ, ಸಂಪರ್ಕ ಮಾಡಿದ್ದರು. ನಾಗಾಲ್ಯಾಂಡ್‌ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ. ಆಚಾರ್ಯರೂ ಪ್ರಧಾನಿಯವರಿಗೆ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next