ಬಾಗಲಕೋಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಜಯಪುರ ಹಾಗೂ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಸಭೆಗಾಗಿ ಏ. 18 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ ಎಂದು ಶಾಸಕ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಸಂಚಾಲಕ ಡಾ| ವೀರಣ್ಣ ಚರಂತಿಮಠ ತಿಳಿಸಿದರು.
ನಗರದ ರೋಟರಿ ಸರ್ಕಲ್ ಬಳಿ ಇರುವ ರೈತ ದೊಡ್ಡಮನಿ ಅವರ 20 ಎಕರೆ ಹೊಲದಲ್ಲಿ ಮೋದಿ ಕಾರ್ಯಕ್ರಮಕ್ಕಾಗಿ ವೇದಿಕೆ, 3 ಹೆಲಿಪ್ಯಾಡ್ ಹಾಗೂ ಸುಮಾರು 15 ಎಕರೆ ಪ್ರದೇಶದಲ್ಲಿ ಪೆಂಡಾಲ್ (ಸಾರ್ವಜನಿಕರು ಕುಳಿತುಕೊಳ್ಳಲು) ಹಾಕಲಾಗುತ್ತಿದೆ ಎಂದರು.
ಪ್ರಧಾನಿ ಮೋದಿ ಅವರು ಏ. 18ರಂದು ಮಧ್ಯಾಹ್ನ 1ಕ್ಕೆ ಬಾಗಲಕೋಟೆಗೆ ಬರಲಿದ್ದಾರೆ. ಅಂದು ಒಟ್ಟು ಮೂರು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ಬೆಳಗ್ಗೆ ಮಹಾರಾಷ್ಟ್ರದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು, ಬಾಗಲಕೋಟೆಗೆ ಮಧ್ಯಾಹ್ನ ಬರಲಿದ್ದಾರೆ. ಇಲ್ಲಿನ ಕಾರ್ಯಕ್ರಮದ ಬಳಿಕ ಚಿಕ್ಕೋಡಿಗೆ ತೆರಳುವರು ಎಂದು ತಿಳಿಸಿದರು.
ಒಟ್ಟು 20 ಎಕರೆ ಭೂಮಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ನಿರ್ದೇಶನದಂತೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗುತ್ತಿದೆ. ಮೂರು ಪ್ರತ್ಯೇಕ ಹೆಲಿಪ್ಯಾಡ್ ಕೂಡ ಮಾಡಲಾಗುತ್ತಿದೆ. ಬಿಸಿಲು ಹೆಚ್ಚಿರುವುದರಿಂದ ಸಾರ್ವಜನಿಕರು, ಕಾರ್ಯಕರ್ತರು ಕುಳಿತುಕೊಳ್ಳಲು ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಹುಬ್ಬಳ್ಳಿಯ ಶ್ರೀನಿವಾಸ ಪೆಂಡಾಲ್‌ದವರಿಗೆ ವಹಿಸಲಾಗಿದೆ ಎಂದರು.
ವಿಜಯಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಹಾಗೂ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ 8 (ನರಗುಂದ ಕ್ಷೇತ್ರ ಸೇರಿ) ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಒಟ್ಟು 2 ಲಕ್ಷ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮಾಜಿ ಶಾಸಕ ನಾರಾಯಣಸಾ ಬಾಂಡಗೆ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ಮುಖಂಡರಾದ ಅಶೋಕ ಲಿಂಬಾವಳಿ, ಅಶೋಕ ಲಾಗಲೋಟಿ, ರಾಜು ರೇವಣಕರ, ಕೇಶವ ಭಜಂತ್ರಿ, ಜಿ.ಎನ್. ಪಾಟೀಲ, ಪ್ರಭುಸ್ವಾಮಿ ಸರಗಣಾಚಾರಿ, ಸವಿತಾ ಲೆಂಕೆನ್ನವರ, ಅನಿತಾ ಸರೋದೆ, ರೇವತಿ ಅಳಗವಾಡಿ ಮುಂತಾದವರು ಉಪಸ್ಥಿತರಿದ್ದರು.