Advertisement

ಅಪಮಾನಕ್ಕೆ ಕ್ಷಮೆಯಿಲ್ಲ: ದೀದಿ ವಿರುದ್ಧ ಮೋದಿ ಟೀಕಾ ಪ್ರಹಾರ

02:42 AM Feb 23, 2021 | Team Udayavani |

ಹೊಸದಿಲ್ಲಿ: ಬಂಗಾಲ ಸಂಸ್ಕೃತಿಗೆ ಅಪಮಾನ ಎಸಗಿ, ಓಟು ಬ್ಯಾಂಕ್‌ ರಾಜಕೀಯ ಮಾಡಿದವರನ್ನು ಪಶ್ಚಿಮ ಬಂಗಾಲದ ಜನತೆ ಯಾವತ್ತೂ ಕ್ಷಮಿಸುವುದಿಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿ, ದೀದಿ ಸರಕಾರದ ವಿರುದ್ಧ ವಾಕ್‌ಪ್ರಹಾರ ನಡೆಸಿದರು.

Advertisement

ಮೆಟ್ರೋ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದ ಪ್ರಧಾನಿ, ಹೂಗ್ಲಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ “ಟಿಎಂಸಿ ಆಡಳಿತದಲ್ಲಿ ದುರ್ಗಾಪೂಜಾ ಮತ್ತು ವಿಸರ್ಜನೆಗೂ ನಿರ್ಬಂಧ ವಿಧಿಸಲಾಗಿದೆಯೆಂದರೆ, ಇದು ಓಟು ಬ್ಯಾಂಕ್‌ ರಾಜಕಾರಣದ ಪರಮಾವಧಿ ಅಲ್ಲದೆ ಬೇರೇನೂ ಅಲ್ಲ’ ಎಂದು ಆರೋಪಿಸಿದರು.

ಬಂಕೀಮರಿಗೂ ಅಪಮಾನ: “ಭಾರತ ಗುಲಾಮಗಿರಿಯ ಗಾಢ ಕತ್ತಲೆಯಲ್ಲಿದ್ದಾಗ ಬಂಕೀಮಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿತ್ತು. ಆದರೆ, ಅವರು ಬಾಳಿರುವ ಮನೆ ಇಂದು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ಬಂಕೀಮರಿಗೂ ದೀದಿ ಸರಕಾರ ಕನಿಷ್ಠ ಗೌರವ ನೀಡದೆ, ಬಂಗಾಲದ ಜನತೆಗೆ ಅಪಮಾನ ಎಸಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಿಜೆಪಿಯ ಸೋನಾರ್‌ ಬಂಗಾಲ (ಬಂಗಾರದ ಬಂಗಾಲ) ಪರಿಕಲ್ಪನೆ ಈ ನೆಲದ ಚರಿತ್ರೆ, ಸಂಸ್ಕೃತಿಗೆ ಮರುಜೀವ ನೀಡಲಿದೆ’ ಎಂದು ಭರವಸೆ ನೀಡಿದರು.

ಬೆಂಗಾಲಿ ಬೇಟಿಗೆ ಟಾಂಗ್‌: ಬಂಗಾಲದ ಪುತ್ರಿ ಎಂದು ಮಮತಾ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದಾರೆ. ಪ. ಬಂಗಾಲದ 1-1.75 ಕೋಟಿ ಮನೆಗಳಲ್ಲಿ ಕೇವಲ 9 ಲಕ್ಷ ಮನೆಗಳಿಗಷ್ಟೇ ನೀರಿನ ಸಂಪರ್ಕವಿದೆ. ನೀರಿಲ್ಲದೆ ಮಹಿಳೆಯರ ಯಾತನೆ ಮುಗಿಲು ಮುಟ್ಟಿದೆ. ಮಮತಾ ಸರಕಾರ ಬಂಗಾಲದ ಪುತ್ರಿಯರಿಗೇ ಅನ್ಯಾಯ ಎಸಗುತ್ತಿದೆ. ಆ ಮಹಿಳೆಯರು ಖಂಡಿತಾ ತೃಣಮೂಲ ಕಾಂಗ್ರೆಸನ್ನು ಕ್ಷಮಿಸುವುದಿಲ್ಲ’ ಎಂದರು.

Advertisement

ಸುಲಿಗೆ ಮುಕ್ತ ಬಂಗಾಲ: ಕೇಂದ್ರ ಸರಕಾರದ ಎಲ್ಲ ಯೋಜನೆಗಳಿಗೂ ಅಡ್ಡಗಾಲು ಹಾಕಿದ್ದರಿಂದಾಗಿ ಬಂಗಾಲದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಸುಲಿಗೆ ಮುಕ್ತ, ಉದ್ಯೋಗ ಯುಕ್ತ ಬಂಗಾಲ ನಿರ್ಮಾಣಗೊಳ್ಳಲಿದೆ. ಕೇವಲ ರಾಜಕೀಯ ಪರಿವರ್ತನೆಗೆ ಮಾತ್ರವಲ್ಲ; ಬಂಗಾಲ ನೆಲದ ನೈಜ ಬದಲಾವಣೆಗೆ, ಅಭಿವೃದ್ಧಿಗೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಒತ್ತಿಹೇಳಿದರು.

“ದಿಲ್ಲಿ- ದಿಸ್‌ಪುರ ದೂರವಿಲ್ಲ’: ಪ. ಬಂಗಾಲ ಭೇಟಿಗೂ ಪೂರ್ವದಲ್ಲಿ ಈಶಾನ್ಯದ ಮತ್ತೂಂದು ಚುನಾವಣ ರಾಜ್ಯ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ 3,300 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಈ ವೇಳೆ ಕಾಂಗ್ರೆಸ್‌ ವಿರುದ್ಧ ಟೀಕಾಬಾಣ ಪ್ರಯೋಗಿಸಿದ ಪ್ರಧಾನಿ, “ಸ್ವಾತಂತ್ರ್ಯ ಬಂದಾಗಿನಿಂದ ಹಲವು ದಶಕಗಳ ಕಾಲ ಆಳಿದವರು ದಿಲ್ಲಿ ಮತ್ತು ದಿಸ್‌ಪುರ ಬಹಳ ದೂರವಿದೆ ಅಂತಲೇ ಭಾವಿಸಿದ್ದರು. ಅದಕ್ಕಾಗಿ ಅಸ್ಸಾಂನ ಅಭಿವೃದ್ಧಿಯನ್ನೇ ಅವಗಣಿಸಿದ್ದರು. ಆದರೆ ಈಗ ನಿಮಗೆ ದಿಲ್ಲಿ ದೂರ ಇಲ್ಲವೇ ಇಲ್ಲ… ಅದು ನಿಮ್ಮ ಬಾಗಿಲ ಬಳಿಯೇ ಇದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next