ಅಹ್ಮದಾಬಾದ್ : ಎರಡನೇ ಹಂತದ ಚುನಾವಣೆಯತ್ತ ಮುಖ ಮಾಡಿರುವ ಗುಜರಾತ್‌ನ ರಾಜಧಾನಿಯಲ್ಲಿ ನಾಳೆ ಮಂಗಳವಾರ ರೋಡ್ ಶೋ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅನುಮತಿ ನಿರಾಕರಿಸಲಾಗಿದೆ.
ನಾಳೆ ಮಂಗಳವಾರದ ಪ್ರಸ್ತಾವಿತ ರೋಡ್ ಶೋ ದಿಂದ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕುಂಟಾಗಬಹುದೆಂಬ ಭೀತಿಯಲ್ಲಿ ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ಅದಕ್ಕೆ ಅಹ್ಮದಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ರೋಡ್ ಶೋಗೆ ಸಕಾರಣವಾಗಿ ಅನುಮತಿ ನಿರಾಕರಿಸಿರುವುದನ್ನು ಅಹ್ಮದಾಬಾದ್ ಪೊಲೀಸ್ ಕಮಿಷನರ್ ಅನೂಪ್ ಕುಮಾರ್ ಸಿಂಗ್ ದೃಢೀಕರಿಸಿದ್ದಾರೆ.
ಧರಣೀಧರ ದಿಂದ ದೇರಾಸರ್ ವರೆಗೆ ರೋಡ್ ಶೋ ನಡೆಸಲು ಅನುಮತಿ ನೀಡುವಂತೆ ಬಿಜೆಪಿ ಕೋರಿತ್ತು; ಜಗನ್ನಾಥ ಮಂದಿರದಿಂದ ಮೇಮ್‌ಕೋ ಚಾರ್ ರಸ್ತಾ ವರೆಗೆ ರೋಡ್ ಶೋ ನಡೆಸಲು ಕಾಂಗ್ರೆಸ್ ಅನುಮತಿ ಕೋರಿತ್ತು. ಎರಡು ಕೋರಿಕೆಗಳನ್ನು ಕಾನೂನು ಮತ್ತು ಸುವ್ಯವಸ್ಥೆಯ ಕಾರಣಕ್ಕೆ ನಿರಾಕರಿಸಲಾಗಿದೆ ಎಂದು ಅನೂಪ್ ಕುಮಾರ್ ಸಿಂಗ್ ಹೇಳಿದರು.
ಡಿ.14ರಂದು ನಡೆಯುವ ಗುಜರಾತ್ ಎರಡನೇ ಹಂತದ ಚುನಾವಣೆಯಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿ.18ರಂದು ಮತ ಎಣಿಕೆ ನಡೆಯಲಿದೆ.