Advertisement

ಪರ್ಸೆಂಟೇಜ್‌ ಸರ್ಕಾರದತ್ತ ಮೋದಿ ಕಣ್ತೆರೆದು ನೋಡಲಿ : ಮಲ್ಲಿಕಾರ್ಜುನ ಖರ್ಗೆ

10:07 PM Apr 12, 2022 | Team Udayavani |

ಕಲಬುರಗಿ: ಗುತ್ತಿಗೆದಾರರಿಂದ ಶೇ.40ರಷ್ಟು ಪರ್ಸೆಂಟೇಜ್‌ ಪಡೆಯಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಖುದ್ದು ಪ್ರಧಾನಿ ಮೋದಿಯವರೆಗೂ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆದರೆ ಈಗಲಾದರೂ ಎಚ್ಚೆತ್ತುಕೊಂಡು ಕಣ್ತೆರೆದು ನೋಡಲಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಪರ್ಸೆಂಟೇಜ್‌ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರು ಖುದ್ದು ಪ್ರಧಾನಿ ನರೇಂದ್ರ ಮೋದಿವರೆಗೂ ದೂರು ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಮುಖ್ಯವಾಗಿ ಅಭಿವೃದ್ಧಿಗೆ ಹೆಸರಾದ ರಾಜ್ಯದಲ್ಲಿ ಪರ್ಸೆಂಟೇಜ್‌ ರಾಜಕಾರಣ ನಡೆಯುತ್ತಿರುವುದು ದುರಂತ.

ಹೀಗಿದ್ದರೂ, ಉತ್ತಮ ಆಡಳಿತ ನೀಡುವತ್ತ ಲಕ್ಷ್ಯ ವಹಿಸದೇ ನಾನು ಮಾಡಿದ್ದೇ ಸರಿ ಎನ್ನುವ ಭ್ರಮೆಯಲ್ಲಿರುವುದು ನಿಜಕ್ಕೂ ದುರಂತ. ಈಗಲಾದರೂ ಕೆಟ್ಟ ಮನಃಸ್ಥಿತಿಯಿಂದ ಮೋದಿ ಹೊರಬರಲಿ. ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ಒಮ್ಮೆ ಕಣ್ತೆರೆದು ನೋಡಲಿ. ಒಟ್ಟಾರೆ ತಾನು ಮಾಡಿದ್ದೇ ಸರಿ, ಏನು ಮಾಡಿದರೂ ಜನರು ಸಹಿಸಿಕೊಳ್ಳುತ್ತಾರೆ ಎಂಬ ಗುಂಗಿನಲ್ಲಿ ಮೋದಿ ಇದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ವ್ಯಾಪಕಗೊಂಡ ಪರ್ಸೆಂಟೇಜ್‌ಗೆ ಗುತ್ತಿಗೆದಾರರರು ನಲುಗಿ ಹೋಗಿದ್ದಾರೆ. ಡಬಲ್‌ ಇಂಜಿನ್‌ ಸರ್ಕಾರವೆಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ಹಾಳು ಮಾಡುತ್ತಿದೆ. ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದರೂ ಕ್ರಮ ಕೈಗೊಳ್ಳಲಿಲ್ಲ. ಈಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಡೆತ್‌ ನೋಟ್‌ ಬರೆದಿಟ್ಟು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ತಮ್ಮ ಬಳಿಯಲ್ಲಿ ಇಲ್ಲ. ಆದರೆ, ಸರ್ಕಾರದ ಪರ್ಸೆಂಟೇಜ್‌ ಹೊಡೆತದಿಂದ ಗುತ್ತಿಗೆದಾರರರು ಬೇಸತ್ತು ಹೋಗಿದ್ದಾರೆ.

ಸರ್ಕಾರಕ್ಕೆ ಪರ್ಸೆಂಟೇಜ್‌ ಕೊಡಬೇಕು ಎಂದು ಗುತ್ತಿಗೆದಾರರು ಬಹಿರಂಗವಾಗಿ ಹೇಳಿದ್ದಾರೆ. ಆತ್ಮಹತ್ಯೆ ಪ್ರಕರಣ ಕುರಿತಂತೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

ಯಾವುದೇ ಘಟನೆ ಕುರಿತು ಕಾಂಗ್ರೆಸ್‌ ಕಾಲದಲ್ಲಿ ಏನಾಗಿತ್ತು ಅಂತಾ ಹೇಳುತ್ತಾರೆ. ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ನೀವು ಬಂದು ಏನ್‌ ಮಾಡುತ್ತಿದ್ದೀರಿ? ಎನ್ನುವುದನ್ನು ಹೇಳಿ ಎಂದರೆ ಬೇರೆಯದನ್ನೇ ಹೇಳಿ ಮುನ್ನಡೆಯುತ್ತಿದ್ದಾರೆ. ಮಾಧ್ಯಮಗಳು ಸಹ ಮೋದಿ ಮಾಡಿದ್ದನ್ನು ಒಪ್ಪಿಕೊಳ್ಳೋದಕ್ಕೆ ಮುಂದಾಗಿವೆ. ಹಿಂದೆ ಗುತ್ತಿಗೆದಾರರು ಭಯಪಡುತ್ತಿದ್ದರು. ಹಿರಿಯ ಅಧಿಕಾರಿಗಳು, ಸಚಿವರ ವಿರುದ್ಧ ದೂರು ನೀಡಲು ಹಿಂಜರಿಯುತ್ತಿದ್ದರು. ಆದರೆ ಸಹನೆ ಮೀರಿದೆ. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ ಎಂದರು.

ರಾಜ್ಯದಲ್ಲಿ ಧರ್ಮಗಳ ನಡುವೆ ಸಣ್ಣ-ಸಣ್ಣ ವಿಷಯಕ್ಕೂ ಸಂಘರ್ಷ ನಡೆಯುತ್ತಿರುವುದು ಹಾಗೂ ಧರ್ಮದ ಹೆಸರಿನಲ್ಲಿ ದಂಗಲ್‌ ಮಾಡಿಸುತ್ತಿರುವುದು ಬಹಳ ಕೆಟ್ಟ ವಿಚಾರ. ಅಲ್ಲದೇ ಪ್ರಚೋದಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಮುಖ್ಯವಾಗಿ ಡಬಲ್ಇಂಜಿನ್‌ ಸರ್ಕಾರ ಇರುವುದರಿಂದ ರೈಲ್ವೆ ಹಳಿ ಮೇಲೆ ಕುಳಿತಿರುವ ಜನರು ಸಾಯುತ್ತಿದ್ದಾರೆ. ರೈಲು ಹಿಂದೆ ಹೋದರೂ, ಮುಂದೆ ಹೋದರೂ ಜನರ ಮೇಲೆ ಹಾಯ್ದುಕೊಂಡು ಹೋಗುತ್ತಿದೆ ಎಂದು ಟೀಕಿಸಿದರಲ್ಲದೇ “ಇಡಿ’ ವಿಚಾರಣೆ ಬಗ್ಗೆ ಮಾತನಾಡುವುದಿಲ್ಲ. ಅದು ಪಕ್ಷದ ವಿಚಾರ. ಹೀಗಾಗಿ ಇಲ್ಲಿ ಮಾತನಾಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next