Advertisement

ಸರ್ಕಾರದ ಸಾಧನೆ ತಿಳಿಸುವ ಮೋದಿ ಫೆಸ್ಟ್‌ಗೆ ಚಾಲನೆ

12:48 PM Jun 03, 2017 | Team Udayavani |

ಬೆಂಗಳೂರು: ಮೂರು ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಮಗ್ರ ಬದಲಾವಣೆಯಾಗಿದ್ದು ಇದನ್ನು ಮತ್ತಷ್ಟು ಬಲಗೊಳಿಸಲು ದೇಶಾದ್ಯಂತ “ಮೋದಿ ಫೆಸ್ಟ್‌’ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Advertisement

ನಗರದ ಮಲ್ಲೇಶ್ವರ ಸರ್ಕಾರಿ ಶಾಲೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಯೋಜನೆ ಬಿಂಬಿಸುವ “ಮೋದಿ ಫೆಸ್ಟ್‌’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ ವರ್ಷಪೂರ್ತಿ ಜನಪ್ರತಿನಿಧಿಗಳು ಮಾಡಿರುವ ಸಾಧನೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆಯೇ? ಇಲ್ಲವೇ? ತಲುಪಿದ್ದೇ ಆದರೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದರ ಬಗ್ಗೆ ಜನರ ಮನದಾಳ ತಿಳಿಯುವುದೇ “ಫೆಸ್ಟ್‌’ ನ ಮೂಲ ಉದ್ದೇಶ,’ ಎಂದು ಸಚಿವರು ತಿಳಿಸಿದರು.

ಇದಕ್ಕಾಗಿಯೇ ಕೇಂದ್ರದ ಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಎಲ್ಲರೂ ಜನರ ಬಳಿಗೆ ಹೋಗಿ ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ. ಒಂದು ವೇಳೆ ಯೋಜನೆಗಳಲ್ಲಿ ತೊಡಕಿದ್ದರೆ ಅವರಿಂದ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು ಎಂದು ಹೇಳಿದರು.

ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಮತ್ತು ಜನರ ನಡುವೆ ಸಂಪರ್ಕ ಇರಲಿಲ್ಲ. ಆದರೆ, ನರೇಂದ್ರ ಮೋದಿ ಬಂದ ನಂತರ, “ಮನ್‌ ಕೀ ಬಾತ್‌’ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಜನರನ್ನು ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದರು. ಶಾಸಕರಾದ ಸುರೇಶ್‌ ಕುಮಾರ್‌, ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next