ದಿಬ್ರುಗಢ: ಏಷ್ಯಾದ ಅತಿ ಉದ್ದದ ರೈಲು-ರಸ್ತೆ ಸೇತುವೆ ಅಸ್ಸಾಂನ ಬೊಗಿಬೀಲ್ ಸೇತುವೆಯನ್ನು ಮಂಗಳವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
4.9 ಕಿ.ಮೀ ಉದ್ದದ ಈ ಸೇತುವೆಯನ್ನು ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಇದು ಭಾರತದಲ್ಲೇ ಮೊದಲ ಬಾರಿಗೆ ವೆಲ್ಡ್ ಮಾಡಿ ನಿರ್ಮಿಸಲಾದ ಸೇತುವೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಯುರೋಪಿ ಯನ್ ಮಾನದಂಡದ ಪ್ರಕಾರ ಮೊದಲ ಬಾರಿಗೆ ಭಾರತದಲ್ಲಿ ವೆಲ್ಡ್ ಮಾಡಿ ಸೇತುವೆ ನಿರ್ಮಾಣ ಮಾಡ ಲಾ ಗಿದೆ. ಸಂಪೂರ್ಣವಾಗಿ ವೆಲ್ಡ್ ಮಾಡಿದ ಸೇತುವೆಯ ನಿರ್ವಹಣೆ ವೆಚ್ಚ ಅತ್ಯಂತ ಕಡಿಮೆ ಇರುತ್ತದೆ.
ಈ ಸೇತುವೆಯನ್ನು 5900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಿನ 120 ವರ್ಷಗಳವರೆಗೆ ಈ ಸೇತುವೆಯನ್ನು ನಿರ್ವಹಿಸಲಾಗುತ್ತದೆ. ಅಸ್ಸಾಂನಿಂದ ಅರುಣಾಚಲ ಪ್ರದೇಶಕ್ಕೆ ತೆರಳುವ ಸಮಯವನ್ನು ನಾಲ್ಕು ತಾಸುಗಳಷ್ಟು ಅಂದರೆ 170 ಕಿ.ಮೀ ಕಡಿಮೆ ಮಾಡಲಿದೆ. ಅಷ್ಟೇ ಅಲ್ಲ, ದೆಹಲಿಯಿಂದ ದಿಬ್ರುಗಢಕ್ಕೆ ಪ್ರಯಾಣಿಸುವ ರೈಲಿನ ಸಮಯವೂ ಮೂರು ತಾಸು ಕಡಿಮೆಯಾಗುತ್ತದೆ.
ಕೆಳಭಾಗದಲ್ಲಿ ಎರಡು ರೈಲ್ವೆ ಲೈನ್ ಇದ್ದು, ಮೇಲ್ಭಾಗದಲ್ಲಿ ಮೂರು ಲೇನ್‌ನ ರಸ್ತೆ ಇದೆ. ರಸ್ತೆ ಕಾಂಗ್ರೀಟ್‌ನದ್ದಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಐದು ತಿಂಗಳುಗಳ ಕಾಲ ಬ್ರಹ್ಮಪುತ್ರಾ ನದಿಯಲ್ಲಿನ ನೀರಿನ ಹರಿವನ್ನು ನಿಯಂತ್ರಿಸಲಾಗಿತ್ತು. ಒಟ್ಟು 80 ಸಾವಿರ ಟನ್ ಸ್ಟೀಲ್ ಬಳಕೆಯಾಗಿದ್ದು, 1 ಸಾವಿರ ಟನ್ ಹೈಡ್ರಾಲಿಕ್ ಜಾಕ್ ಬಳಸಲಾಗಿದೆ.
ದೇವೇಗೌಡರಿಂದ ಶಂಕು: ಈ ಸೇತುವೆ ನಿರ್ಮಾಣಕ್ಕೆ 1992ರಲ್ಲಿ ಆಗಿನ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಕಾಮಗಾರಿ 2002ರಲ್ಲಿ ಶುರುವಾಗಿತ್ತು.