ಗಾಂಧಿನಗರ : ಭಾರತೀಯ ಜನತಾ ಪಕ್ಷದ ವಿರುದ್ಧ ಕುದುರೆ ವ್ಯಾಪಾರದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, “ಗುಜರಾತಿನ ಜನರನ್ನು ನೀವು ಖರೀದಿಸಲಾರಿರಿ’ ಎಂದು ಗುಡುಗಿದ್ದಾರೆ.
“ನಿಮಗೆ ಬೇಕಿರುವಷ್ಟು ಹಣವನ್ನು ನೀವು ಗುಜರಾತ್‌ನಲ್ಲಿ ಚೆಲ್ಲಿ; ಆದರೆ ನೀವು ಜನರ ಮನೋಭಾವವನ್ನು ಬದಲಾಯಿಸಲಾರಿರಿ.ಇಂದಿನ ಗುಜರಾತ್ ಸರಕಾರ ರಾಜ್ಯದ ಜನರ ಧ್ವನಿಯನ್ನು ಹೊಸಕಿ ಹಾಕಲು ಬಯಸುತ್ತಿದೆ; ಅವರನ್ನು ಖರೀದಿಸಲು ಬಯಸುತ್ತಿದೆ; ಆದರೆ ಮೋದಿ ಜೀ ನೀವು ಜನರ ಧ್ವನಿಯನ್ನು ಖರೀದಿಸಲಾರಿರಿ’ ಎಂದು ರಾಹುಲ್ ಗಾಂಧಿ ಅವರಿಂದು ಗಾಂಧಿನಗರದಲ್ಲಿ ಏರ್ಪಟ್ಟಿದ್ದ “ನವಸರ್ಜನ್ ಜನಾದೇಶ್ ಮಹಾಸಮ್ಮೇಳನ್’ನಲ್ಲಿ ಮಾತನಾಡುತ್ತಾ ಹೇಳಿದರು.
ಗುಜರಾತ್ ಜನರ ದಿಲ್ ಕೀ ಬಾತ್ ಹಂಚಿಕೊಂಡ ರಾಹುಲ್, “ಗುಜರಾತಿನ ಯುವ ಪೀಳಿಗೆಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಸಿಗುತ್ತಿಲ್ಲ’ ಎಂದು ಟೀಕಿಸಿದರು.
“ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಮೋದಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ?’ ಎಂದು ರಾಹುಲ್ ಪ್ರಶ್ನಿಸಿದರು.
“ಮೋದಿ ಜೀ, ನೀವು ಹಿಂದೆ ನ ಖಾವೂಂಗಾ, ನ ಖಾನೇ ದೂಂಗಾ ಎಂದು ಭ್ರಷ್ಟಾಚಾರದ ವಿರುದ್ಧ ಹೇಳಿದ್ದೀರಿ; ಈಗ ನೀವು ತಿನ್ನಿಸುವುದನ್ನು ಆರಂಭಿಸಿರುವಿರಿ (ಅಬ್ ಖೀಲಾನಾ ಶುರು ಕರ್ ದಿಯಾ)’ ಎಂದು ರಾಹುಲ್ ಜರೆದರು.