ವಿದ್ಯಾನಗರ: ಸ್ವತ್ಛ ಆಡಳಿತದ ಮೂಲಕ ಜನತೆಯ ಬೇಡಿಕೆಗಳನ್ನು ಈಡೇರಿಸಿ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಬೇಕು. ಬಲಿ ಚಕ್ರವರ್ತಿಯ ತ್ಯಾಗ ಭೂಮಿಯಾದ ಕೇರಳದ ಜನತೆ ಇದಕ್ಕೆ ಕಾರಣಕರ್ತರಾಗಬೇಕು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅವರು ಕಸಬ ಕಡಪ್ಪುರದಲ್ಲಿ ರವಿವಾರ ನಡೆದ ಎನ್‌ಡಿಎ ಚುನಾವಣಾ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ಮುಕ್ತವಾದ ಪರಿಶ್ರಮಯುಕ್ತ, ಕಳಂಕವಿಲ್ಲದ ಆಡಳಿತದಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಕೇರಳದಲ್ಲಿ ಸೈದ್ಧಾಂತಿಕ ಸಂಘರ್ಷದಿಂದ ಜೀವಕ್ಕೆ ಬೆಲೆ ಇಲ್ಲದಾಗಿದೆ. ಜನರ ಸಂರಕ್ಷಣೆಯ ಹೊಣೆ ಹೊತ್ತ ಸರಕಾರ ಅದೆಷ್ಟೋ ಜನರ ಬಲಿದಾನವನ್ನು ಕಂಡೂ ಕಾಣದಂತೆ ನಟಿಸುತ್ತಿದೆ. ಜನರಿಗೆ ನೀಡಬೇಕಾದ ಸೌಲಭ್ಯಗಳೂ ದೊರಕದೆ ಹೋಗಲು ಇಲ್ಲಿನ ಭ್ರಷ್ಟ ಆಡಳಿತವೇ ಕಾರಣ ಎಂದು ಅವರು ಹೇಳಿದರು.
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಮಾತನಾಡಿದರು.
ರಕ್ಷಣಾ ಸಚಿವರನ್ನು ಪಕ್ಷದ ಜಿಲ್ಲಾಧ್ಯಕ್ಷ ಅಡ್ವ ಶ್ರೀಕಾಂತ್ ಸ್ವಾಗತಿಸಿದರು.
ಬಿಜೆಪಿಯ ಪ್ರಮೀಳಾ ಸಿ. ನಾಯಕ್ ಮಲ್ಲಿಗೆ ಹಾಗೂ ಗುಲಾಬಿ ಹೂಗಳಿಂದ ವಿಶೇಷವಾಗಿ ತಯಾರಿಸಿದ ಕಿರೀಟವನ್ನು ತೊಡಿಸಿದರು. ಕಾಸರಗೋಡು ಲೋಕಸಭಾ ಅಭ್ಯರ್ಥಿ ರವೀಶ ತಂತ್ರಿ ಅವರನ್ನು ಸಚಿವರು ಗೌರವಿಸಿದರು.