ಉಡುಪಿ: ಪ್ರಧಾನಿ ನರೇಂದ್ರ ಮೋದಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ರಾಷ್ಟ್ರಸೇವೆಗೆ ತನ್ನನ್ನು ಬಾಲ್ಯದಿಂದಲೇ ತೊಡಗಿಸಿಕೊಂಡವರು. ದೇಶದ ಪ್ರಧಾನಿಯಾಗುವೆನೆಂಬ ಊಹೆ ಅವರಲ್ಲಿರಲಿಲ್ಲ. ಅವರು ಪ್ರತಿಭೆ ಮತ್ತು ಕಳಂಕರಹಿತ ಶ್ರದ್ಧಾ ಪೂರ್ವಕ ಕಠಿನ ದುಡಿಮೆಯಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಇಸ್ರೇಲ್‌ನ ಪ್ರಧಾನ ಪತ್ರಿಕೆಯೊಂದು ಜಗತ್ತಿನಲ್ಲಿಯೇ ಹೆಚ್ಚು ಪ್ರಾಮುಖ್ಯವನ್ನು ಹೊಂದಿದ ವ್ಯಕ್ತಿ ನರೇಂದ್ರ ಮೋದಿಯವರೆಂದು ಸಂಬೋಧಿಸಿದೆ.
ಇದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಹೇಳಿಕೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಸ್ತಾರಕರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಬೆಳವಣಿಗೆ ಉತ್ತಮ ನಡವಳಿಕೆಯ ಕಾರ್ಯಕರ್ತರಿಂದ ಸಾಧ್ಯ. ಬಿಜೆಪಿ ಅಂದಿನಿಂದ ಇಂದಿನವರೆಗೆ ಶಿಸ್ತನ್ನು ಕಾಯ್ದುಕೊಂಡು ಬಂದ ಪಕ್ಷ. ಹಾಗಾಗಿ ಬಿಜೆಪಿಯ ಶಿಸ್ತು ಮತ್ತು ಬದ್ಧತೆಯಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬಂದಿದೆ. ಜನ ಮಾನಸದಲ್ಲಿ ನಂಬಿಕೆಗೆ ಅರ್ಹವಾದ ಪಕ್ಷವಾಗಿ ಬೆಳೆದುನಿಂತಿದೆ ಎಂದು ಹೇಳಿದರು.
ಬಿಜೆಪಿಯ ಸಂಘಟನೆ ಮತ್ತು ವಿಚಾರಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದನ್ನು ಅಥೆìçಸಿಕೊಂಡು ಮೇಲಕ್ಕೇರುವ ಶ್ರದ್ಧೆ ಮತ್ತು ಬದ್ಧತೆ ಕಾರ್ಯಕರ್ತರಿಗೆ ಬೇಕು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರಿಂದ ಈ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 325 ರಷ್ಟು ಕಾರ್ಯಕರ್ತರು ತಮಗೆ ನಿಗದಿಯಾದಡೆಗಳಿಗೆ ತೆರಳಿದ್ದಾರೆ. ಒಟ್ಟು 750 ಜನ ವಿಸ್ತಾರಕರಾಗಿ ಹೊರಡಲು ತಯಾರಿ ನಡೆದಿದೆ. ಜು. 30 ರ ಒಳಗಾಗಿ ವಿಸ್ತಾರಕರ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದರು. ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಪಕ್ಷದ ಪದಾಧಿಕಾರಿಗಳಾದ ಕೆ. ಉದಯ ಕುಮಾರ್ ಶೆಟ್ಟಿ, ಶ್ಯಾಮಲಾ ಎಸ್. ಕುಂದರ್, ಪ್ರಸಾದ್ ಮಂಗಳೂರು, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್, ಸುರೇಶ್ ಶೆಟ್ಟಿ ಗುರ್ಮೆ, ಕಟಪಾಡಿ ಶಂಕರ ಪೂಜಾರಿ, ರವಿ ಅಮೀನ್ ಮತ್ತು ಇತರರು ಉಪಸ್ಥಿತರಿದ್ದರು.