ಹೊಸದಿಲ್ಲಿ: ದೇಗುಲಗಳಲ್ಲಿ ಅರ್ಚಕರಾಗುವವರಿಗೆ ಸೂಕ್ತ ಪಠ್ಯಕ್ರಮ ಮತ್ತು ಕೌಶಲ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕಾಗಿ ಕೌಶಲಾಭಿವೃದ್ಧಿ ಮಂಡಳಿ ಮೂಲಕ ತರಗತಿಗಳನ್ನು ನಡೆಸಲು ಯೋಜಿಸುತ್ತಿದೆ. ಈ ಮೂಲಕ ದೇಶಿಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದು ಸರಕಾರದ ಲೆಕ್ಕಾಚಾರ.
ಹೊರ ದೇಶಗಳಲ್ಲಿ ಇರುವ ಭಾರತೀಯ ಸಮುದಾಯದವರು ಕೆಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಪರಿಣತರಿಗಾಗಿ ಶೋಧ ನಡೆಸುತ್ತಿರುತ್ತಾರೆ. ಸರಕಾರದ ಈ ಯೋಜನೆಯಿಂದ ಹಿಂದೂ ಸಮುದಾಯದವರು ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಅವರಿಗೆ ಉದ್ಯೋಗಾವಕಾಶವೂ ಹೇರಳವಾಗಿ ಲಭಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವೈದಿಕ ಸಂಸ್ಕೃತಿ ರಕ್ಷಣೆಗೆ ಕ್ರಮ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೌಶಲಾಭಿವೃದ್ಧಿ ಸಚಿವಾಲಯದ ಅಧಿಕಾರಿ “ದೇಶದ ಸಂಸ್ಕೃತಿ ಮತ್ತು ವೇದ ಕಾಲದ ರಿವಾಜುಗಳನ್ನು ಕಾಪಾಡಿಕೊಳ್ಳಲು ಇದೊಂದು ಪ್ರಯತ್ನ. ಅಂಥ ಜ್ಞಾನವನ್ನು ಕಾಪಾಡುವುದು ಮಾತ್ರವಲ್ಲದೆ ಅದನ್ನು ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಲೂ ಇದು ವೇದಿಕೆ ಒದಗಿಸಿಕೊಡುತ್ತದೆ’ ಎಂದಿದ್ದಾರೆ.
ಹಿಂದೂ ಧಾರ್ಮಿಕ ವಿಧಿ ವಿಧಾನಗಳಿಗೆ ಪಠ್ಯಕ್ರಮ ರಚಿಸಿ, ಅದನ್ನು ತರಬೇತಿಗೆ ಬಳಸಿಕೊಳ್ಳುವುದರ ಮೂಲಕ ಸೂಕ್ತ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದಂತಾ ಗುತ್ತದೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಪಠ್ಯಕ್ರಮ: ವಿವಿಧ ರೀತಿಯ ಪೂಜೆ, ಯಜ್ಞ, ಯಾಗಾದಿಗಳನ್ನು ನಡೆಸುವುದು ಹೇಗೆ ಎಂಬುದರ ಬಗ್ಗೆ ಪಠ್ಯ ಕ್ರಮ ಸಿದ್ಧಗೊಳ್ಳಲಿದೆ. ಅದು ರಾಷ್ಟ್ರೀಯ ಕೌಶಲ ಅರ್ಹತಾ ನಿಯಮಾವಳಿಗಳ ಅನ್ವಯವೇ ಇರಲಿದೆ. ಕೌಶಲ ಮತ್ತು ಯೋಗ್ಯತೆ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಜ್ಞಾನಗಳನ್ನು ಆಯಾ ಅಭ್ಯರ್ಥಿಗಳ ಕ್ಷಮತೆ ನೋಡಿಕೊಂಡು ಒಂದರಿಂದ ಹತ್ತವರ ವರೆಗೆ ಶ್ರೇಯಾಂಕ ನೀಡುವ ಬಗ್ಗೆಯೂ ಪ್ರಸ್ತಾವನೆ ಇದೆ. ಈ ಕೋರ್ಸ್‌ಗಳಿಗಾಗಿ ಸಂಸ್ಕೃತ ಭಾಷೆಯ ಜ್ಞಾನ ಕಡ್ಡಾಯಗೊಳಿಸಬೇಕು ಎಂಬುದನ್ನು ನಿಗದಿಮಾಡುವ ಸಾಧ್ಯತೆ ಇದೆ. ಏಕೆಂದರೆ ಮಂತ್ರೋಚ್ಛಾರಣೆ ಇರುವುದು ಆ ಭಾಷೆಯಲ್ಲಿ.
ಸ್ಥಳ ನಿಗದಿಯಾಗಿಲ್ಲ: ಇಂಥ ಕೋರ್ಸ್‌ಗಳನ್ನು ಎಲ್ಲಿ ಶುರು ಮಾಡಬೇಕು ಎಂಬು ದರ ಬಗ್ಗೆ ಸ್ಥಳ ನಿಗದಿಯಾಗದೇ ಇದ್ದರೂ, ಮಥುರಾ ಮತ್ತು ವಾರಾಣಸಿಗಳಲ್ಲಿ ಆರಂಭಿಸುವ ಬಗ್ಗೆ ಚಿಂತನೆಗಳಿವೆ. ವಾರಾ ಣಸಿಯಲ್ಲಿರುವ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ರಾಜಾರಾಮ ಶುಕ್ಲಾ ಕೇಂದ್ರ ಸರಕಾರಕ್ಕೆ ಹೊಸ ಮಾದರಿಯ ಐಡಿಯಾ ನೀಡಿದ್ದಾರೆ.
ದೇಶದ ಸಾಂಪ್ರದಾಯಿಕ ನಿರ್ಮಾಣ ಕ್ಷೇತ್ರದ ತಂತ್ರಜ್ಞಾನ – ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳನ್ನು ಸರಿಯಾಗಿ ಅಧ್ಯಯನ ಮಾಡಿದರೆ ಅಂಥ ವ್ಯಕ್ತಿಗಳಿಗೆ ಪ್ರತಿ ತಿಂಗಳಿಗೆ ಕಡಿಮೆಯೆಂದರೂ 50 ಸಾವಿರ ರೂ. ಗಳಿಸಬಹುದೆಂದು ಅವರು ಪ್ರತಿಪಾದಿಸುತ್ತಾರೆ.